ಹಸಿರಲೆ ಗೊಬ್ಬರ ಬೀಜಗಳ ಬಳಕೆಯಿಂದ ಮಣ್ಣಿನ ಆರೋಗ್ಯ ವೃದ್ಧಿ.

ಕೃಷಿಯಲ್ಲಿ ಗುಣಮಟ್ಟದ ಆಹಾರ ಉತ್ಪಾದಿಸುವ ದೃಷ್ಟಿಯಿಂದ ಸರ್ಕಾರವು ಸಮಗ್ರ ಪೋಷಕಾಂಶ ನಿರ್ವಹಣೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಮಣ್ಣಿನ ಫಲವತ್ತತೆಯನ್ನು ಉತ್ತಮ ಪಡಿಸುವ ಸಲುವಾಗಿ ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಸಾವಯವ ಗೊಬ್ಬರಗಳನ್ನು
ಸೇರಿಸುವುದು ಅವಶ್ಯಕವಾಗಿರುತ್ತದೆ.

ರಾಜ್ಯದ ವಿವಿಧ ಜಿಲ್ಲೆಗಳ ಮಣ್ಣಿನಲ್ಲಿ ಸಾವಯವ ಅಂಶವು ಕಡಿಮೆಯಾಗುತ್ತಾ ಬಂದಿದ್ದು, ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಸುಮಾರು 58.00 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಮಣ್ಣಿನಲ್ಲಿ ಶೇ.0.5ಕ್ಕೂ ಕಡಿಮೆ ಸಾವಯವ ಇಂಗಾಲ ಇರುವುದು ಮಣ್ಣು ಮಾದರಿಗಳ ವಿಶ್ಲೇಷಣೆಯಿಂದ ಕಂಡುಬಂದಿರುತ್ತದೆ. ಆದ್ದರಿಂದ ಮಣ್ಣಿಗೆ ಸಾವಯವ ಇಂಗಾಲ ಸೇರ್ಪಡೆ ಮಾಡುವುದು ಅತಿ ಅವಶ್ಯಕವಿರುತ್ತದೆ. ಪ್ರಮುಖವಾಗಿ ಹಸಿರಲೆ ಗೊಬ್ಬರಗಳಾದ ಸೆಣಬು, ಡಯಾಂಚಾ, ಉದ್ದು, ಹೆಸರು, ಅಲಸಂದಿ, ಹುರುಳಿ, ವೆಲ್ವೆಟ್ ಬೀನ್ಸ್ ಇತ್ಯಾದಿಗಳು ಹಾಗೂ ಸಾವಯವ ಗೊಬ್ಬರಗಳನ್ನು ಮಣ್ಣಿಗೆ ಸೇರ್ಪಡೆ ಮಾಡುವುದರಿಂದ ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸಬಹುದಾಗಿದೆ. ಈ ಸಲುವಾಗಿ ದ್ವಿದಳ ಧಾನ್ಯಗಳನ್ನು ಒಣ ವಾತಾವರಣದ ಭೂಮಿಯಲ್ಲಿ ಮತ್ತು ಹಸಿರೆಲೆ ಗೊಬ್ಬರ ಬೀಜಗಳನ್ನು ತೇವಯುಕ್ತ ವಾತಾವರಣದ ಭೂಮಿಯಲ್ಲಿ ಬಳಕೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಮಣ್ಣಿನ ಆರೋಗ್ಯ ವೃದ್ಧಿಯಲ್ಲಿ ಹಸಿರಲೆ ಗೊಬ್ಬರ ಬೀಜಗಳ ಪಾತ್ರ:
ಸಾವಯವ ಇಂಗಾಲ ಹೆಚ್ಚಳ: ಹಸಿರು ಗೊಬ್ಬರ ಬೆಳೆಗಳನ್ನು ಮಣ್ಣಿನಲ್ಲಿ ಸೇರಿಸಿದಾಗ ಸಾವಯವ ಪದಾರ್ಥ ಹೆಚ್ಚಾಗಿ ಮಣ್ಣಿನ ಕಾರ್ಬನ್/ಇಂಗಾಲ ಪ್ರಮಾಣ ವೃದ್ಧಿಯಾಗುತ್ತದೆ. ಇದರಿಂದ ಮಣ್ಣಿನ ರಚನೆ ಸುಧಾರಿಸುತ್ತದೆ.

ಸಾರಜನಕ ಸ್ಥಿರೀಕರಣ:
ದ್ವಿದಳ ವರ್ಗದ ಹಸಿರು ಗೊಬ್ಬರ ಬೆಳೆಗಳು ವಾತಾವರಣದ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣಿಗೆ ಒದಗಿಸುತ್ತವೆ.
ಇದರಿಂದ ರಾಸಾಯನಿಕ ಯೂರಿಯಾ ಬಳಕೆ ಕಡಿಮೆಯಾಗುತ್ತದೆ.

ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಳ:
ಹಸಿರು ಗೊಬ್ಬರದಿಂದ ಮಣ್ಣಿನಲ್ಲಿನ ಪ್ರಯೋಜನಕಾರಿ ಬ್ಯಾಕ್ಟಿರಿಯಾ, ಶಿಲೀಂಧ್ರ ಹಾಗೂ ಇತರೆ
ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚುತ್ತದೆ.

ಮಣ್ಣಿನ ನೀರು ಹಿಡಿದಿಡುವ ಸಾಮರ್ಥ್ಯ ವೃದ್ಧಿ:
ಸಾವಯವ ಪದಾರ್ಥ ಹೆಚ್ಚುವುದರಿಂದ ಮಣ್ಣು ಹೆಚ್ಚು ನೀರನ್ನು ಸಂಗ್ರಹಿಸಿಡಲು ಸಾಧ್ಯವಾಗುತ್ತದೆ. ಇದು ಬರ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ಸಹಾಯಕವಾಗುತ್ತದೆ.

ಮಣ್ಣಿನ ಸಾಂದ್ರತೆ ಕಡಿಮೆ: ಹಸಿರು ಗೊಬ್ಬರ ಬೆಳೆಗಳ ಬೇರುಗಳು ಮಣ್ಣನ್ನು ಸಡಿಲಗೊಳಿಸಿ ಗಾಳಿ ಮತ್ತು ನೀರಿನ ಚಲನವಲನವನ್ನು ಸುಧಾರಿಸುತ್ತವೆ.

ಪೋಷಕಾಂಶಗಳ ಲಭ್ಯತೆ ಹೆಚ್ಚಳ: ರಂಜಕ, ಪೊಟ್ಯಾಶ್ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಲಭ್ಯತೆ ಹೆಚ್ಚಾಗಿ, ಬೆಳೆಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ.
ಕೃಷಿಯಲ್ಲಿ ಹಸಿರಲೆ ಗೊಬ್ಬರ ಬೀಜಗಳ ಪ್ರಯೋಜನಗಳು: ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಹಾಗೂ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಬೆಳೆ ಇಳುವರಿ ಮತ್ತು ಗುಣಮಟ್ಟ ಹೆಚ್ಚುತ್ತದೆ. ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ದೀರ್ಘಕಾಲಿಕ ಮಣ್ಣಿನ ಫಲವತ್ತತೆ ಕಾಪಾಡಬಹುದು.

ಹಸಿರು ಗೊಬ್ಬರ ಬೀಜಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ಮಣ್ಣಿನ ಆರೋಗ್ಯ ಸುಧಾರಿಸಿ, ಬರ ನಿರೋಧಕ ಕೃಷಿಯನ್ನು ಬಲಪಡಿಸಬಹುದು. ವಿಶೇಷವಾಗಿ ಅಕ್ಕಿ, ಕಬ್ಬು ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಹಸಿರು ಗೊಬ್ಬರದ ಬಳಕೆ ಉತ್ತಮ ಫಲಿತಾಂಶ ನೀಡುತ್ತಿದೆ. ಆದ್ದರಿಂದ ರೈತರು ಹೆಚ್ಚಾಗಿ ಕೃಷಿಯಲ್ಲಿ ಹಸಿರೆಲೆ ಗೊಬ್ಬರ ಬೀಜಗಳ ಬಳಕೆ ಮಾಡುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ
ತಿಳಿಸಿದೆ.