ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ನೈಋತ್ಯ ಮುಂಗಾರು ಮಾರುತಗಳು ನಾಲ್ಕು ದಿನಗಳ ವಿಳಂಬದ ಬಳಿಕ ಕೊನೆಗೂ ಕೇರಳ ಪ್ರವೇಶಿಸಿ ಈಗ ಚುರುಕುಗೊಂಡಿದೆ, ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೇರಳದಲ್ಲಿ ಮುಂಗಾರು ಆರಂಭವಾದ ಬೆನ್ನಲ್ಲೇ ಕರ್ನಾಟಕದಲ್ಲೂ ಮಳೆ ಚುರುಕುಗೊಳ್ಳಲಿದ್ದು, ಮುಂದಿನ ಆರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ ಮೇ 26ರ ವೇಳೆಗೆ ಮುಂಗಾರು ಕೇರಳ ಪ್ರವೇಶಿಸುವ ನಿರೀಕ್ಷೆ ವ್ಯಕ್ತಪಡಿಸಿತ್ತು. ಆದರೆ ಹವಾಮಾನ ಪರಿಸ್ಥಿತಿಗಳ ಕಾರಣದಿಂದ ಮುಂಗಾರು ಆಗಮನ ವಿಳಂಬವಾಗಿದ್ದು, ಇದೀಗ ಕೇರಳ ತಲುಪಿದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲೂ ಮುಂಗಾರು ಮಳೆಯ ಚಟುವಟಿಕೆಗಳು ವೇಗ ಪಡೆಯಲಿವೆ.
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಆರಂಭವಾಗಿದೆ. ಇಂದಿನಿಂದ ಜೂನ್ 9ರವರೆಗೆ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಕರಾವಳಿಗೆ ಆರೆಂಜ್ ಅಲರ್ಟ್
ಮುಂಗಾರು ಚುರುಕುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಇತರೆ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಜೂನ್ 4ರಂದು ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಜೂನ್ 5ರಿಂದ ಜೂನ್ 10ರವರೆಗೆ ಮಳೆಯ ತೀವ್ರತೆ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಹಾಗೂ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಮಳೆ ಹೆಚ್ಚಾಗುವ ಸಾಧ್ಯತೆಯಿಂದ ನದಿ, ಹೊಳೆಗಳ ತೀರ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಸಮುದ್ರಕ್ಕೆ ತೆರಳುವ ಮೀನುಗಾರರು ಹವಾಮಾನ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

















