ನೂತನ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರಿಗೆ ಶಾಸಕ ಡಾ.ಮಂಜುನಾಥ ಭಂಡಾರಿ ಅಭಿನಂದನೆ

ಮಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಸೂತ್ರ ಹಿಡಿದಿರುವ ಜನಪ್ರಿಯ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಹಿರಿಯ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ಮಾನ್ಯ ಡಿ.ಕೆ. ಶಿವಕುಮಾರ್ ಅವರ ಅದ್ವಿತೀಯ ರಾಜಕೀಯ ಮುತ್ಸದ್ದಿತನ, ಸಂಘಟನಾ ಶಕ್ತಿ ಹಾಗೂ ಅಪಾರ ಆಡಳಿತಾತ್ಮಕ ಅನುಭವದ ಸಾರಥ್ಯದಲ್ಲಿ ಕರ್ನಾಟಕವು ಸುಶಾಸನ ಮತ್ತು ಸರ್ವತೋಮುಖ ಪ್ರಗತಿಯ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಅವರ ಜನಪರ ಚಿಂತನೆಗಳು ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಲಿವೆ,” ಎಂದು ಆಶಿಸಿದರು.

ಇದೇ ವೇಳೆ ಪಕ್ಷದ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ಅವರ ದಕ್ಷತೆಯನ್ನು ಶ್ಲಾಘಿಸಿದ ಅವರು, ” ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಬಿ.ಕೆ. ಹರಿಪ್ರಸಾದ್ ಅವರ ಸೈದ್ಧಾಂತಿಕ ಬದ್ಧತೆ ಹಾಗೂ ಸಂಘಟನಾ ಚಾತುರ್ಯವು ಕೆಪಿಸಿಸಿಗೆ ಹೊಸ ಚೈತನ್ಯವನ್ನು ತುಂಬಲಿದೆ. ಅವರ ಮಾರ್ಗದರ್ಶನದಲ್ಲಿ ಪಕ್ಷವು ತಳಮಟ್ಟದಿಂದ ಮತ್ತಷ್ಟು ಸೌಹಾರ್ದಯುತವಾಗಿ ಬಲಗೊಳ್ಳಲಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರದ ಈ ನವ ಪರ್ವದಲ್ಲಿ ಉಭಯ ಧುರೀಣರ ಜಂಟಿ ನಾಯಕತ್ವವು ರಾಜ್ಯದ ಹಿತ ಕಾಯುವಲ್ಲಿ ಹಾಗೂ ಪಕ್ಷವನ್ನು ಯಶಸ್ಸಿನ ಉನ್ನತ ಶಿಖರಕ್ಕೆ ಮುನ್ನಡೆಸುವಲ್ಲಿ ಸಂಪೂರ್ಣ ಯಶಸ್ವಿಯಾಗಲಿ ಎಂದು ಡಾ. ಮಂಜುನಾಥ ಭಂಡಾರಿ ಅವರು ಹಾರೈಸಿದ್ದಾರೆ.