ಕೌಲಾಲಂಪುರ್: ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಷಿಯಲ್ ಮೀಡಿಯಾ ವ್ಯಸನವನ್ನು ತಡೆಗಟ್ಟಲು Malaysia ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಖಾತೆ ತೆರೆಯುವುದನ್ನು ನಿಷೇಧಿಸಿದೆ.
ಹೊಸ ನಿಯಮದ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು Facebook, Instagram, TikTok ಹಾಗೂ YouTube ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಲು ಅವಕಾಶ ಇರುವುದಿಲ್ಲ. ಇದರೊಂದಿಗೆ, ಬಳಕೆದಾರರ ವಯಸ್ಸು ಪರಿಶೀಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿದೆ.
ನಿಯಮ ಉಲ್ಲಂಘಿಸುವ ಕಂಪನಿಗಳಿಗೆ 1 ಕೋಟಿ ರಿಂಗಿಟ್ (ಸುಮಾರು 23.95 ಕೋಟಿ ಭಾರತೀಯ ರೂಪಾಯಿ) ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಕ್ಕಳನ್ನು ಹಾನಿಕಾರಕ ವಿಷಯಗಳು, ಸೈಬರ್ ಬುಲ್ಲಿಂಗ್ ಹಾಗೂ ಅತಿಯಾದ ಸೋಷಿಯಲ್ ಮೀಡಿಯಾ ಬಳಕೆಯಿಂದ ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ನಿಯಮವು ಮಕ್ಕಳಿಗೆ ಇಂಟರ್ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದಿಲ್ಲ ಎಂದು ಮಲೇಷ್ಯಾ ಸರ್ಕಾರ ಸ್ಪಷ್ಟಪಡಿಸಿದೆ.
ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಮಾಧ್ಯಮ ವೇದಿಕೆಗಳು ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಅಪ್ರಾಪ್ತರ ಖಾತೆಗಳು ಹಾಗೂ ಹಾನಿಕಾರಕ ವಿಷಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಗಮನಾರ್ಹವಾಗಿ, ಆಸ್ಟ್ರೇಲಿಯಾ Australia, ಬ್ರೇಝಿಲ್ Brazil ಮತ್ತು ಇಂಡೊನೇಷ್ಯಾ Indonesia ಸೇರಿದಂತೆ ಹಲವು ದೇಶಗಳು ಮಕ್ಕಳ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಇದೇ ರೀತಿಯ ನಿಯಮಗಳನ್ನು ಈಗಾಗಲೇ ಜಾರಿಗೆ ತಂದಿವೆ.

















