ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗಾಗಿ ಘೋಷಿಸಿದ ಫ್ರೀ ಬಸ್ ಪಾಸ್ ಗೆ ಅರ್ಜಿ ಸಲ್ಲಿಸೋದು ಹೇಗೆ?

ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಮಹತ್ವದ ಘೋಷಣೆಯನ್ನು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ D. K. Shivakumar ಮಾಡಿದ್ದಾರೆ. ಈ ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳ ಪ್ರಯಾಣ ವೆಚ್ಚದ ಭಾರ ಕಡಿಮೆಯಾಗಲಿದ್ದು, ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಸರ್ಕಾರದ ಘೋಷಣೆಯ ಬಳಿಕ ಬಸ್ ಪಾಸ್ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈವರೆಗೆ ಜಾರಿಯಲ್ಲಿದ್ದ ನಿಯಮಗಳ ಪ್ರಕಾರವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ ಇನ್ನು ಮುಂದೆ ಬಸ್ ಪಾಸ್ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ.

ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ ಮೊಬೈಲ್ ಫೋನ್, ಸೈಬರ್ ಸೆಂಟರ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವವರಿಗೆ ಫಾರ್ಮ್ ಶುಲ್ಕ 10 ರೂ. ಹಾಗೂ ಆನ್‌ಲೈನ್ ಸೇವಾ ಶುಲ್ಕ 100 ರೂ. ವಿಧಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲೆ ಅಥವಾ ಕಾಲೇಜಿನ ಪ್ರವೇಶಾತಿ ರಶೀದಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಅಗತ್ಯವಾಗಿವೆ. ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಯ ಮುಖ್ಯಸ್ಥರು (ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು) ಅವರ ಸಹಿ ಹಾಗೂ ಸಂಸ್ಥೆಯ ಸೀಲು ಪಡೆಯುವುದು ಕಡ್ಡಾಯವಾಗಿದೆ.

ನಂತರ ಬಿಎಂಟಿಸಿ ಪಾಸ್ ವಿಭಾಗದ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ ಅನುಮೋದನೆ ನೀಡಲಿದ್ದಾರೆ. ಅರ್ಜಿ ಅನುಮೋದನೆಯಾದ ಬಳಿಕ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತದೆ.

ಮೊಬೈಲ್‌ಗೆ ಸಂದೇಶ ಬಂದ ನಂತರ ವಿದ್ಯಾರ್ಥಿಗಳು ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಟಿಟಿಎಂಸಿ ಕೇಂದ್ರಗಳಿಗೆ ಭೇಟಿ ನೀಡಿ ಬಸ್ ಪಾಸ್ ಪಡೆದುಕೊಳ್ಳಬಹುದು. ಈ ಹಿಂದೆ ವಿಧಿಸಲಾಗುತ್ತಿದ್ದ ಪಾಸ್ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲದೆ ಉಚಿತವಾಗಿ ಬಸ್ ಪಾಸ್ ವಿತರಿಸಲಾಗುತ್ತದೆ.

ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಇನ್ನಷ್ಟು ಸುಲಭ ಹಾಗೂ ಅನುಕೂಲಕರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.