ಉಡುಪಿ: ಎಚ್ಐವಿ ಮತ್ತು ಏಡ್ಸ್ ಸೋಂಕು ಹಾಗೂ ಇದರಿಂದಾಗುವ ಸಾವಿನ ಪ್ರಮಾಣವನ್ನು ಸೊನ್ನೆಗೆ ತರುವ ಉದ್ದೇಶದಿಂದ ‘ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ’ ಎಂಬ
ಘೋಷವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನಾಚರಣೆಯ ಪ್ರಯುಕ್ತ ಬೃಹತ್ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಡಿ. 3ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 9.30ಕ್ಕೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಲಯನ್ಸ್ ಭವನದವರೆಗೆ ಆಯೋಜಿಸಿರುವ ಜಾಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಚಾಲನೆ ನೀಡುವರು. 10.30ಕ್ಕೆ ನಡೆಯುವ ಸಭಾಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿವೇಕಾನಂದ ಎಸ್. ಪಂಡಿತ್ ಉದ್ಘಾಟಿಸುವರು ಎಂದರು.
ಜಿಲ್ಲೆಯ 35 ಕಾಲೇಜುಗಳ ಸಹಭಾಗಿತ್ವದೊಂದಿಗೆ ಜಿಲ್ಲೆಯಾದ್ಯಂತ ಎಚ್ಐವಿ–ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ರಕ್ತದಾನ ಶಿಬಿರ, ಜನಪದ ಕಲೆಯಾದ ಯಕ್ಷಗಾನದ ಮೂಲಕ ಮಾಹಿತಿ ನೀಡುವ ಕೆಲಸ ನಡೆಯಲಿದೆ. 265 ಸರ್ಕಾರಿ ಶಾಲೆಗಳಲ್ಲಿ ಹದಿಹರೆಯದ ಮಕ್ಕಳಿಗೆ ಏಡ್ಸ್ ಹರಡುವಿಕೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಏಡ್ಸ್ ಹರಡುವಿಕೆ, ತಡೆಗಟ್ಟುವಿಕೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಮತ್ತು ಏಡ್ಸ್ ಪೀಡಿತರು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಇವರೆಲ್ಲರ ಸಹಕಾರದಿಂದ ಜಿಲ್ಲೆಯಲ್ಲಿ ಏಡ್ಸ್ ನಿಂದಾಗುವ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. 2015ರ ಬಳಿಕ ತಾಯಿಯಿಂದ ಮಗುವಿಗೆ ಹರಡುವ ಸೋಂಕು ತಡೆಗಟ್ಟುವಲ್ಲಿ ಶೇ. 100ರಷ್ಟು ಗುರಿ ಸಾಧನೆ ಮಾಡಲಾಗಿದ್ದು, ಹುಟ್ಟಿದ ಮಕ್ಕಳಲ್ಲಿ ಏಡ್ಸ್ ಸೋಂಕು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 12 ಐಸಿಟಿಸಿ ಘಟಕಗಳಿದ್ದು, ಎಚ್ಐವಿಗೆ ಸಂಬಂಧಿಸಿ ಆಪ್ತ ಸಮಾಲೋಚನೆ ನೀಡಲಾಗುತ್ತದೆ. 64 ಪ್ರಾಥಮಿಕ ಕೇಂದ್ರಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಇದ್ದು, 2018–19ನೇ ಸಾಲಿನಲ್ಲಿ ಶೇ 0.05 ಎಚ್ಐವಿ ಸೋಂಕಿತರನ್ನು ಗುರುತಿಸಲಾಗಿದೆ. ಸಮುದಾಯದ ಪಾಲುದಾರಿಕೆಯಿಂದ ಎಚ್ಐವಿ ಮತ್ತು ಏಡ್ಸ್ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ಇದ್ದರು.