ಉಡುಪಿ: ನಗರ ವ್ಯಾಪ್ತಿಯಲ್ಲಿ ಅನಧೀಕೃತಕವಾಗಿ ಕಾರ್ಯಚರಿಸುತ್ತಿದ್ದ ‘ಬೌನ್ಸ್’ ದ್ವಿಚಕ್ರ ವಾಹನ ಬಾಡಿಗೆ ನೀಡುವ ಉದ್ದಿಮೆಯ ಮೇಲೆ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ನೇತೃತ್ವದಲ್ಲಿ ಶನಿವಾರ ದಾಳಿ ನಡೆಸಿದ್ದು, 15 ಬೌನ್ಸ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಹಾಗೂ ಮಣಿಪಾಲದ ಪ್ರಮುಖ ಸ್ಥಳಗಳಲ್ಲಿ ಬಾಡಿಗೆ ನೀಡಲು ನಿಲ್ಲಿಸಲಾಗಿದ್ದ ದಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರವ್ಯಾಪ್ತಿಯಲ್ಲಿ ಬೌನ್ಸ್ ದಿಚಕ್ರ ವಾಹನಗಳು ಅನಧೀಕೃತವಾಗಿ ಕಾರ್ಯಚರಿಸುತ್ತಿದ್ದು, ಇದರ ವಿರುದ್ಧ ಆಟೊ ಚಾಲಕರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ನಿಟ್ಟಿನಲ್ಲಿ ಡಿಸಿ ಅವರು ಅನಧೀಕೃತ ಬೌನ್ಸ್ ವಾಹನಗಳ
ವಿರುದ್ಧ ಕ್ರಮಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ನಗರಸಭೆ, ಆರ್ಟಿಒ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಬೌನ್ಸ್ ದಿಚಕ್ರ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.