ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಹೆಚ್ಚು ಅಂಟಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಅತಿಯಾದ ಮೊಬೈಲ್ ಬಳಕೆ ಮಕ್ಕಳ ಆರೋಗ್ಯ, ಓದು ಹಾಗೂ ನಡವಳಿಕೆಗೆ ಹಾನಿ ಉಂಟುಮಾಡಬಹುದು. ಹೀಗಾಗಿ ಪೋಷಕರು ಕೆಲವು ಸರಳ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ.
ಸಮಯ ಮಿತಿ ನಿಗದಿ ಮಾಡಿ
ಮಕ್ಕಳು ದಿನಕ್ಕೆ ಎಷ್ಟು ಸಮಯ ಮೊಬೈಲ್ ಬಳಸಬೇಕು ಎಂಬುದಕ್ಕೆ ಸ್ಪಷ್ಟ ನಿಯಮ ಮಾಡಿ. ಓದು, ಊಟ ಮತ್ತು ಮಲಗುವ ಸಮಯದಲ್ಲಿ ಫೋನ್ ಬಳಕೆ ಸಂಪೂರ್ಣ ತಪ್ಪಿಸಿ.
ಹೊರಾಂಗಣ ಆಟಗಳಿಗೆ ಉತ್ತೇಜನೆ ನೀಡಿ
ಮೊಬೈಲ್ ಬದಲು ಮಕ್ಕಳು ಸೈಕಲ್, ಕ್ರಿಕೆಟ್, ಬ್ಯಾಡ್ಮಿಂಟನ್ ಮುಂತಾದ ಆಟಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿ. ಇದರಿಂದ ದೈಹಿಕ ಚಟುವಟಿಕೆ ಹೆಚ್ಚುತ್ತದೆ.
ಪೋಷಕರೇ ಮಾದರಿಯಾಗಿರಿ
ಮಕ್ಕಳ ಮುಂದೆ ಪೋಷಕರು ನಿರಂತರವಾಗಿ ಮೊಬೈಲ್ ಬಳಸಿದರೆ ಮಕ್ಕಳು ಕೂಡ ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಮನೆಯಲ್ಲೇ “ನೋ ಫೋನ್ ಟೈಮ್” ಇಡಿ.
ಕಥೆ ಪುಸ್ತಕಗಳ ಅಭ್ಯಾಸ ಬೆಳೆಸಿ
ಚಿತ್ರಕಥೆ, ಪೌರಾಣಿಕ ಕಥೆಗಳು ಅಥವಾ ಮಕ್ಕಳಿಗೆ ಇಷ್ಟವಾಗುವ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿದರೆ ಮೊಬೈಲ್ ಮೇಲಿನ ಆಸಕ್ತಿ ನಿಧಾನವಾಗಿ ಕಡಿಮೆಯಾಗುತ್ತದೆ.
ಕುಟುಂಬ ಸಮಯ ಹೆಚ್ಚಿಸಿ
ಒಟ್ಟಿಗೆ ಊಟ ಮಾಡುವುದು, ಮಾತುಕತೆ, ಆಟಗಳು ಅಥವಾ ಸಣ್ಣ ಪ್ರವಾಸಗಳು ಮಕ್ಕಳ ಗಮನವನ್ನು ಮೊಬೈಲ್‌ನಿಂದ ಬೇರೆಡೆಗೆ ತಿರುಗಿಸುತ್ತವೆ.
ಮೊಬೈಲ್‌ನ್ನು ಬಹುಮಾನವಾಗಿ ಕೊಡಬೇಡಿ
“ಹೋಂವರ್ಕ್ ಮಾಡಿದ್ರೆ ಮೊಬೈಲ್ ಕೊಡ್ತೀನಿ” ಎನ್ನುವ ಅಭ್ಯಾಸ ಮಕ್ಕಳಲ್ಲಿ ಫೋನ್ ಬಗ್ಗೆ ಹೆಚ್ಚು ಆಕರ್ಷಣೆ ಹುಟ್ಟಿಸುತ್ತದೆ. ಇದನ್ನು ತಪ್ಪಿಸುವುದು ಉತ್ತಮ.
ಕ್ರಿಯೇಟಿವ್ ಚಟುವಟಿಕೆಗಳಲ್ಲಿ ತೊಡಗಿಸಿ
ಚಿತ್ರಕಲೆ, ಸಂಗೀತ, ನೃತ್ಯ, ಗಾರ್ಡನಿಂಗ್ ಅಥವಾ ಹಸ್ತಕಲೆಯಂತಹ ಚಟುವಟಿಕೆಗಳು ಮಕ್ಕಳ ಮನಸ್ಸನ್ನು ಸೃಜನಾತ್ಮಕವಾಗಿ ತೊಡಗಿಸಿಡುತ್ತವೆ.
ಮಲಗುವ ಕೋಣೆಗೆ ಮೊಬೈಲ್ ಬೇಡ
ರಾತ್ರಿ ಮಲಗುವಾಗ ಮಕ್ಕಳ ಕೈಯಲ್ಲಿ ಮೊಬೈಲ್ ಇರದಂತೆ ನೋಡಿಕೊಳ್ಳಿ. ಇದು ಉತ್ತಮ ನಿದ್ರೆಗೆ ಸಹಕಾರಿ.

















