ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಹಲವು ಆಸ್ಪತ್ರೆಗಳು ಹೆರಿಗೆ ಸಮಯದಲ್ಲಿ ಪತ್ನಿಯ ಜೊತೆ ಗಂಡ ಇರಲು ಅವಕಾಶ ನೀಡುತ್ತಿವೆ. ವಿದೇಶಗಳಲ್ಲಿ ಬಹಳ ಸಾಮಾನ್ಯವಾಗಿರುವ ಈ ಪದ್ಧತಿ ಈಗ ನಮ್ಮ ದೇಶದಲ್ಲೂ ನಿಧಾನವಾಗಿ ಹೆಚ್ಚುತ್ತಿದೆ. ವೈದ್ಯರು ಮತ್ತು ತಜ್ಞರ ಪ್ರಕಾರ, ಹೆರಿಗೆ ಸಮಯದಲ್ಲಿ ಗಂಡ ಜೊತೆಯಲ್ಲಿರುವುದು ಮಹಿಳೆಯ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಭಾವನಾತ್ಮಕ ಬೆಂಬಲವನ್ನೂ ನೀಡುತ್ತದೆ.
ಜೊತೆಗಾರ ನೀಡುವ ಮನೋಸ್ಥೈರ್ಯ
ಹೆರಿಗೆಯ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು, ಆತಂಕ ಮತ್ತು ಒತ್ತಡದ ನಡುವೆ ತಮ್ಮ ಗಂಡ ಹತ್ತಿರದಲ್ಲಿದ್ದರೆ ಅವರಿಗೆ ಧೈರ್ಯ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಮ್ಮ ಅಥವಾ ಕುಟುಂಬದವರಿಗಿಂತ ಕೆಲ ಮಹಿಳೆಯರಿಗೆ ತಮ್ಮ ಗಂಡನೇ ಹೆಚ್ಚು ಕಂಫರ್ಟ್ ಆಗಿರುತ್ತಾರೆ. ತಮ್ಮ ಅಸ್ವಸ್ಥತೆ, ಭಯ ಮತ್ತು ನೋವನ್ನು ಗಂಡನೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನಲಾಗುತ್ತಿದೆ.
ನೋವು- ನಲಿವಿನಲ್ಲೂ ಸಮಾನತೆ
ಇನ್ನು ಕೆಲ ಮಹಿಳೆಯರ ಅಭಿಪ್ರಾಯದಂತೆ, ಹೆರಿಗೆಯ ನೋವನ್ನು ಗಂಡ ನೇರವಾಗಿ ಕಂಡರೆ ಭವಿಷ್ಯದಲ್ಲಿ ಆತ ಪತ್ನಿಯ ಬಗ್ಗೆ ಇನ್ನಷ್ಟು ಕಾಳಜಿ ವಹಿಸುತ್ತಾನೆ ಎಂಬ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ಡೆಲಿವರಿ ವೇಳೆ ಗಂಡ ತಮ್ಮ ಜೊತೆಯಲ್ಲಿರಬೇಕೆಂದು ಅನೇಕ ಮಹಿಳೆಯರು ಬಯಸುತ್ತಾರೆ.
ತಜ್ಞರ ಪ್ರಕಾರ, ಗಂಡಂದಿರು ಹೆಂಡತಿಯ ಕೈ ಹಿಡಿಯುವುದು, ಧೈರ್ಯ ತುಂಬುವುದು, ಬೆನ್ನು ಉಜ್ಜುವುದು, ನೀರು ಕೊಡುವುದು ಅಥವಾ ಉಸಿರಾಟ ವ್ಯಾಯಾಮದಲ್ಲಿ ಸಹಾಯ ಮಾಡುವುದರಿಂದ ಮಹಿಳೆಗೆ ಮಾನಸಿಕವಾಗಿ ದೊಡ್ಡ ಬೆಂಬಲ ಸಿಗುತ್ತದೆ. ಇದರಿಂದ ಹೆರಿಗೆ ನೋವನ್ನು ಎದುರಿಸುವ ಸಾಮರ್ಥ್ಯವೂ ಹೆಚ್ಚುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

















