ಉಡುಪಿ: ಕರ್ನಾಟಕ ವಿಧಾನಸಭೆ ಉಪಚುನಾವಣೆ ಹೊಸ್ತಿಲಲ್ಲಿ ಜನಪ್ರತಿನಿಧಿಗಳ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಈ ಜಾಲದಲ್ಲಿ ಕರಾವಳಿಯ ಶಾಸಕರೊಬ್ಬರು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹನಿಟ್ರ್ಯಾಪ್ ಜಾಲದ ಬೆನ್ನು ಹತ್ತಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಅಚ್ಚರಿಯ ಮಾಹಿತಿ ದೊರಕಿದ್ದು, ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಇಬ್ಬರು ಅನರ್ಹ ಶಾಸಕರು ಸೇರಿದಂತೆ ಒಟ್ಟು ಆರು ಮಂದಿ ಶಾಸಕರು ಹನಿಟ್ರ್ಯಾಪ್ ಬಲೆಗೆ ಬಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಆರು ಜನರ ಪೈಕಿ ಒಬ್ಬರು ವಿಧಾನ ಪರಿಷತ್ ಸದಸ್ಯ ಹಾಗೂ ಕರಾವಳಿಯ ಶಾಸಕರೊಬ್ಬರು ಕೂಡ ಇದ್ದಾರೆ ಎನ್ನಲಾಗಿದೆ.
ಕರಾವಳಿಯ ಶಾಸಕ ಈಗಾಗಲೇ ತನ್ನದೆಂದು ಹೇಳಲಾಗುತ್ತಿರುವ ರಾಸಲೀಲೆಯ ವಿಡಿಯೋ ದೃಶ್ಯದ ಪ್ರಸಾರಕ್ಕೆ ಹೈಕೋರ್ಟ್ ನಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ.
ಹನಿಟ್ರ್ಯಾಪ್ ಗೆ ಬಳಸಿರುವ ಪೆನ್ ಡ್ರೈವ್ ಸೇರಿದಂತೆ ಇತರ ಉಪಕರಣ ಹಾಗೂ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಪ್ರಕರಣ ಯಾವ ತಿರುವು ಪಡೆಯುತ್ತದೆ ಎನ್ನುವ ಕುತೂಹಲ ಮಾತ್ರ ಉಳಿದುಕೊಂಡಿದೆ.