ಭಾರತದ ಮಾವಿಗೆ ಜಪಾನ್ ನಿಂದ ಹೊಡೆತ: ಜಪಾನ್‌ ನಲ್ಲಿ ಭಾರತೀಯ ಮಾವಿಗೆ ನಿರ್ಬಂಧ, ಕಾರಣ ಏನು?

ನವದೆಹಲಿ: ದೇಶದ ಮಾವು ಬೆಳೆಗಾರರಿಗೆ ಹಾಗೂ ರಫ್ತುದಾರರಿಗೆ ದೊಡ್ಡ ಆಘಾತ ಎದುರಾಗಿದೆ. ಸುಮಾರು 20 ವರ್ಷಗಳ ಬಳಿಕ ಮೊದಲ ಬಾರಿಗೆ Japan ಸರ್ಕಾರವು ಭಾರತದ ಮಾವಿನ ಹಣ್ಣಿನ ಆಮದು ಮೇಲೆ ನಿರ್ಬಂಧ ಹೇರಿದೆ.

ಈ ವರ್ಷದ ಆರಂಭದಲ್ಲಿ ಭಾರತೀಯ ಸಂಸ್ಕರಣಾ ಘಟಕಗಳಲ್ಲಿ ಕೀಟ ನಿಯಂತ್ರಣ ಕ್ರಮಗಳಲ್ಲಿ ದೋಷಗಳು ಪತ್ತೆಯಾಗಿದ್ದ ಹಿನ್ನೆಲೆ, ಭಾರತದಿಂದ ಮಾವಿನ ಹಣ್ಣುಗಳ ಆಮದುಗಳನ್ನು ಜಪಾನ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದ ಬೇಸಿಗೆ ಕಾಲದ ಪ್ರಮುಖ ರಫ್ತು ಹಂಗಾಮಿಗೆ ತೀವ್ರ ಹೊಡೆತ ಬಿದ್ದಿದೆ.

ಅಲ್ಫೋನ್ಸೊ, ಕೇಸರ್, ಲಂಗ್ರಾ ಹಾಗೂ ಬೈಗಾನಪಳ್ಳಿ ಸೇರಿದಂತೆ ಭಾರತದ ಪ್ರೀಮಿಯಂ ಮಾವಿನ ತಳಿಗಳ ರಫ್ತು ಈಗ ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ಜಪಾನ್ ಮಾರುಕಟ್ಟೆಯನ್ನು ಅವಲಂಬಿಸಿದ್ದ ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಹಾಗೂ ದಕ್ಷಿಣ ಭಾರತದ ಕೆಲವು ಬೆಳೆಗಾರರಿಗೆ ಇದರಿಂದ ಆರ್ಥಿಕ ಹೊರೆ ಹೆಚ್ಚುವ ಸಾಧ್ಯತೆ ಇದೆ.

20 ವರ್ಷಗಳ ಬಳಿಕ ಮತ್ತೆ ನಿರ್ಬಂಧ

ಇದಕ್ಕೂ ಮೊದಲು ಹಣ್ಣು ಕೀಟಗಳ ಸಮಸ್ಯೆಯಿಂದ ಜಪಾನ್ ಭಾರತದಿಂದ ಮಾವಿನ ಆಮದು ಮೇಲೆ ನಿಷೇಧ ಹೇರಿತ್ತು. ಬಳಿಕ ಭಾರತವು ತನ್ನ ಸಂಸ್ಕರಣಾ ಮತ್ತು ಕೀಟ ನಿಯಂತ್ರಣ ಕ್ರಮಗಳನ್ನು ಬಲಪಡಿಸಿದ ಕಾರಣ 2006ರಲ್ಲಿ ಆ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.

ಆದರೆ ಇದೀಗ ಮತ್ತೆ ಭಾರತೀಯ ಮಾವಿನ ರಫ್ತುಗಳು ಜಪಾನ್‌ನ ಕಟ್ಟುನಿಟ್ಟಿನ ಸಸ್ಯ ಆರೋಗ್ಯ ಮಾನದಂಡಗಳನ್ನು ಪೂರೈಸುತ್ತಿವೆಯೇ ಎಂಬ ಪ್ರಶ್ನೆಯನ್ನು ಜಪಾನ್ ಅಧಿಕಾರಿಗಳು ಎತ್ತಿದ್ದಾರೆ. ಹಣ್ಣು ನೊಣಗಳಂತಹ ಆಕ್ರಮಣಕಾರಿ ಕೀಟಗಳ ವಿರುದ್ಧ ಜಪಾನ್ ಶೂನ್ಯ-ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ.

ಜಪಾನ್ ಅಧಿಕಾರಿಗಳಿಗೆ ಕಂಡುಬಂದ ದೋಷಗಳೇನು?

ಪ್ರತಿ ರಫ್ತು ಹಂಗಾಮಿನ ಮುನ್ನ ಜಪಾನ್ ಕ್ವಾರಂಟೈನ್ ಅಧಿಕಾರಿಗಳು ಭಾರತದಲ್ಲಿನ ವೇಪರ್ ಹೀಟ್ ಟ್ರೀಟ್‌ಮೆಂಟ್ (VHT) ಕೇಂದ್ರಗಳನ್ನು ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ನಿಯಂತ್ರಿತ ಬಿಸಿ ಮತ್ತು ತೇವಾಂಶದ ಮೂಲಕ ಮಾವಿನ ಹಣ್ಣುಗಳನ್ನು ಕೀಟರಹಿತಗೊಳಿಸಲಾಗುತ್ತದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ರೆಹಮಾನ್‌ಪುರದಲ್ಲಿರುವ VHT ಕೇಂದ್ರದಲ್ಲಿ ಪರಿಶೀಲನೆ ನಡೆದಿದ್ದು, ಅಲ್ಲಿ ಫ್ಯೂಮಿಗೇಶನ್ ಹಾಗೂ ಡಿಸ್ಇನ್ಫೆಕ್ಷನ್ ಕ್ರಮಗಳಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿವೆ ಎಂದು ವರದಿಯಾಗಿದೆ.

ಆದರೆ ನಿಖರವಾಗಿ ಯಾವ ದೋಷಗಳು ಪತ್ತೆಯಾಗಿವೆ ಎಂಬುದನ್ನು ಭಾರತ ಅಥವಾ ಜಪಾನ್ ಸರ್ಕಾರಗಳು ಇನ್ನೂ ಬಹಿರಂಗಪಡಿಸಿಲ್ಲ. ಪರಿಶೀಲನೆಯ ಬಳಿಕ, ಮಾರ್ಚ್ 25, 2026 ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರ ಹೊಂದಿರುವ ಭಾರತೀಯ ಮಾವಿನ ಸರಕುಗಳನ್ನು ಸ್ವೀಕರಿಸುವುದಿಲ್ಲ ಎಂದು ಜಪಾನ್‌ನ ಯೋಕೋಹಾಮಾ ಪ್ಲಾಂಟ್ ಪ್ರೊಟೆಕ್ಷನ್ ಅಸೋಸಿಯೇಶನ್ ಘೋಷಿಸಿದೆ.