ಜಿಮ್ ಹೋಗ್ಬೇಕು ಅಂತಿಲ್ಲ,ಮನೆಲೇ ಇಷ್ಟು ಮಾಡಿ ಸಾಕು, ನಿಮ್ಮ ದೇಹ ಫಿಟ್ ಆಗಿರತ್ತೆ!

ಸರಳ ವ್ಯಾಯಾಮ ಮಾಡಿ:

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅಥವಾ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡುವುದು ಮುಖ್ಯ. ದಿನಪೂರ್ತಿ ವ್ಯಾಯಾಮ ಮಾಡಬೇಕೆಂದಿಲ್ಲ. ದಿನಕ್ಕೆ ಕೇವಲ 5ರಿಂದ 15 ನಿಮಿಷಗಳಷ್ಟು ದೈಹಿಕ ಚಟುವಟಿಕೆ ಮಾಡಿದರೂ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ನಿಯಮಿತ ವ್ಯಾಯಾಮವು ಹೃದಯ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.

ಮನೆಯಲ್ಲಿಯೇ ಒಂದು ನಿಗದಿತ ಸಮಯದಲ್ಲಿ ಸರಳ ವ್ಯಾಯಾಮಗಳನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಹೆಚ್ಚು ಉಪಯುಕ್ತ. ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದಲೂ ದೇಹ ಚುರುಕಾಗಿರುತ್ತದೆ. ಉದಾಹರಣೆಗೆ, ಲಿಫ್ಟ್ ಬಳಕೆಯ ಬದಲು ಮೆಟ್ಟಿಲು ಹತ್ತುವುದು, ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳದೆ ಮಧ್ಯ ಮಧ್ಯೆ ನಡೆಯುವುದು ದೇಹಕ್ಕೆ ಒಳ್ಳೆಯದು.

ದೈಹಿಕ ಚಟುವಟಿಕೆ ಹೇಗಿರಬೇಕು?

ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯಿಂದ ಜನರು ದೀರ್ಘ ಸಮಯ ಕುಳಿತೇ ಇರುವುದು ಸಾಮಾನ್ಯವಾಗಿದೆ. ದೈಹಿಕ ಚಟುವಟಿಕೆ ಕೊರತೆಯು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ದೇಹವನ್ನು ಸಕ್ರಿಯವಾಗಿಡುವುದು ಬಹಳ ಮುಖ್ಯ. ಇದು ಅಕಾಲಿಕ ಸಾವಿನ ಅಪಾಯವನ್ನೂ ಕಡಿಮೆ ಮಾಡಲು ನೆರವಾಗುತ್ತದೆ.

ಆದರೆ ಕೇವಲ 5 ನಿಮಿಷ ವ್ಯಾಯಾಮ ಮಾಡಿದರೆ ಸಾಕು, ಸಂಪೂರ್ಣ ಆರೋಗ್ಯಕರ ಜೀವನ ಸಿಗುತ್ತದೆ ಎಂದು ಅರ್ಥವಲ್ಲ. ಈಗಾಗಲೇ ಫಿಟ್ ಆಗಿರುವವರ ಮೇಲೆ ಇದರ ಪರಿಣಾಮ ಕಡಿಮೆ ಇರಬಹುದು. ಆದರೂ ಏನೂ ಮಾಡದೇ ಇರುವುದಕ್ಕಿಂತ ಸ್ವಲ್ಪವಾದರೂ ದೈಹಿಕ ಚಟುವಟಿಕೆ ಮಾಡುವುದು ಉತ್ತಮ. ವಿಶೇಷವಾಗಿ ಯುವಕರಿಗೆ ಇದು ಬಹಳ ಉಪಯುಕ್ತ. ತಜ್ಞರ ಪ್ರಕಾರ ವಾರಕ್ಕೆ ಕನಿಷ್ಠ 150 ನಿಮಿಷಗಳ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಉತ್ತಮ. ಜಿಮ್ಗೆ ಹೋಗಲು ಸಾಧ್ಯವಾಗದವರು ಸಹ ಸರಳ ವ್ಯಾಯಾಮದ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳಬಹುದು.