ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜೀನಾಮೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಹಲವು ತಿಂಗಳಿಂದ ಚರ್ಚೆಯಾಗುತ್ತಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಲಾಗಿದೆ ಎನ್ನಲಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷದಲ್ಲಿ ಆರಂಭದಿಂದಲೂ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗುತ್ತಿತ್ತು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆದಿದ್ದರೂ, ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯ ಸ್ಥಾನ ನೀಡಲಾಗಿತ್ತು. ಡಿಕೆ ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿತ್ತು.

ಭಾವುಕರಾದ ಸಿದ್ದರಾಮಯ್ಯ

ಇಂದು ಬೆಳಿಗ್ಗೆ ನಡೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಚಿವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ತಾವು ಸಿಎಂ ಸ್ಥಾನ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಅವರು ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ ಎನ್ನಲಾಗಿದೆ. “ಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡಿದ್ದೇವೆ, ಮುಂದೆಯೂ ಉತ್ತಮ ಕೆಲಸ ಮಾಡಿ” ಎಂದು ಸಚಿವರಿಗೆ ಸಲಹೆ ನೀಡಿದ ಬಗ್ಗೆ ವರದಿಯಾಗಿದೆ.

ಡಿಕೆ ಶಿವಕುಮಾರ್ ಮುಂದಿನ ಸಿಎಂ?

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದ ದೀರ್ಘಕಾಲದ ಒಳರಾಜಕೀಯದ ಬಳಿಕ ಇದೀಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಅಂತಿಮ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆಯಿದೆ.

ಹೈಕಮಾಂಡ್‌ನ ಅಂತಿಮ ನಿರ್ಧಾರ

ದೆಹಲಿ ಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದರು. ಅಧಿಕಾರ ಹಂಚಿಕೆ ಒಪ್ಪಂದದಂತೆ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಹೊರಬಂದಿದೆ.