ಕುಂದಾಪುರ: ಮೇ 27 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೆ. ರಾಮಕೃಷ್ಣ ಕಾಮತ್ ಅವರು ವಹಿಸಿದ್ದರು.
ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಿರಂತರ ಪ್ರಯತ್ನ ಯಶಸ್ಸಿಗೆ ದಾರಿ. ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ನಿರಂತರ ಪ್ರಯತ್ನ ಮತ್ತು ಕಾಯುವ ತಾಳ್ಮೆ ಇರಬೇಕು. ಶಿಕ್ಷಣ ಕೇವಲ ಪುಸ್ತಕದ ಜ್ಞಾನವಲ್ಲ, ಬದಲಿಗೆ ಜೀವನದ ಏಳು-ಬೀಳುಗಳನ್ನು ಎದುರಿಸುವ ಧೈರ್ಯ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುವಂತಿರಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ ಡಾ.ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ. ಉಮೇಶ್ ಶೆಟ್ಟಿ ಅವರು ಮಾತನಾಡಿ ಹೆತ್ತವರು ತಮ್ಮ ಮಕ್ಕಳಿಗೆ ಸದ್ವಿಚಾರ, ಸಂಸ್ಕೃತಿ, ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯ ಪ್ರವೃತ್ತರಾಗಬೇಕು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ 2025- 26 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ್ಯಾಂಕ್ ವಿಜೇತ 48 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರದೊಂದಿಗೆ ಬೆಳ್ಳಿಲೋಟ, ಬೆಳ್ಳಿ ನಾಣ್ಯ, ಫಲ ಪುಷ್ಪವನ್ನು ನೀಡಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಪ್ರಸಕ್ತ ಶೈಕ್ಷಣಿಕ ಸಾಲಿನ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿ, ಶೈಕ್ಷಣಿಕ ಪ್ರಗತಿಗೆ ಪೋಷಕರು ಉಪನ್ಯಾಸಕರ ಜೊತೆ ಸಹಕರಿಸಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ರಾಧಾಕೃಷ್ಣ ಶೆಣೈ, ಖಜಾಂಚಿ ಕೆ. ಲಕ್ಷ್ಮೀ ನಾರಾಯಣ ಶೆಣೈ, ಉಪಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಪ್ರಮೀಳಾ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನಿತರ ಪಟ್ಟಿಯನ್ನು ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಹಾಗೂ ಆಂಗ್ಲ ಭಾಷಾ ಉಪನ್ಯಾಸಕಿ ಅಮೃತಾ ವಾಚಿಸಿದರು, ಇಂಗ್ಲೀಷ್ ಉಪನ್ಯಾಸಕಿ ಸುಪ್ರೀತಾ ಶೆಟ್ಟಿ ಹಾಗೂ ಕನ್ನಡ ಉಪನ್ಯಾಸಕ ಸುಧೀರ್ ಅತಿಥಿಗಳನ್ನು ಪರಿಚಯಿಸಿದರು.
ಉಪಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್ ಸ್ವಾಗತಿಸಿದರು, ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಭರತ್ ಚಂದ್ರ. ಕೆ ವಂದಿಸಿದರು. ಕನ್ನಡ ಉಪನ್ಯಾಸಕಿ ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

















