ಬೈಜುಸ್ ಸಂಸ್ಥಾಪಕ ರವೀಂದ್ರನ್ ಗೆ ಆರು ತಿಂಗಳು ಜೈಲು,ನ್ಯಾಯಾಲಯ ನಿಂದನೆ ಆರೋಪದಡಿ ಬಂಧನ

ಸಿಂಗಾಪುರ: ಒಂದು ಕಾಲದಲ್ಲಿ ಭಾರತದ ಅತ್ಯಂತ ಮೌಲ್ಯಯುತ ಎಡ್ಟೆಕ್ ಸಂಸ್ಥೆಗಳಲ್ಲೊಂದಾಗಿದ್ದ BYJU’S ಸಂಸ್ಥೆಯ ಸ್ಥಾಪಕ ರವೀಂದ್ರನ್ Byju Raveendran ಅವರಿಗೆ ಸಿಂಗಾಪುರ ನ್ಯಾಯಾಲಯದಿಂದ ಭಾರೀ ಹಿನ್ನಡೆ ಎದುರಾಗಿದೆ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಅವರನ್ನು ನ್ಯಾಯಾಲಯ ನಿಂದನೆ ಆರೋಪದಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸಿಂಗಾಪುರ ನ್ಯಾಯಾಲಯದ ಪ್ರಕಾರ, ಏಪ್ರಿಲ್ 2024ರಿಂದ ತಮ್ಮ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ಹಲವು ಆದೇಶಗಳನ್ನು ಬೈಜು ರವೀಂದ್ರನ್ ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ. ನ್ಯಾಯಾಲಯದ ಸೂಚನೆಗಳಿಗೆ ಸ್ಪಂದಿಸಲು ವಿಫಲವಾದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ಸೂಚಿಸಲಾಗಿದೆ.

ಇದಕ್ಕೂ ಜೊತೆಗೆ, ಅವರಿಗೆ 90,000 ಸಿಂಗಾಪುರ ಡಾಲರ್ ಕಾನೂನು ವೆಚ್ಚವನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ‘ಬಿಯರ್ ಇನ್ವೆಸ್ಟ್‌ಕೋ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ನಿಜವಾದ ಮತ್ತು ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಕೂಡ ಸೂಚಿಸಲಾಗಿದೆ.

ಈ ಪ್ರಕರಣದಲ್ಲಿ Qatar Holding ಪರವಾಗಿ ‘Drew & Napier’ ಕಾನೂನು ಸಂಸ್ಥೆ ವಾದ ಮಂಡಿಸಿದ್ದು, ಬೈಜುಸ್ ಇನ್ವೆಸ್ಟ್‌ಮೆಂಟ್ಸ್ ಪರವಾಗಿ ‘Fervent Chambers’ ವಕಾಲತ್ತು ವಹಿಸಿದೆ.

ಈ ನಡುವೆ, ವಿದೇಶಿ ಹೂಡಿಕೆದಾರರಿಂದ ಬೈಜುಸ್ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೆರಿಕದ ಸಾಲದಾತರು ಸುಮಾರು 1.2 ಬಿಲಿಯನ್ ಡಾಲರ್ ಸಾಲದ ಡೀಫಾಲ್ಟ್ ಪ್ರಕರಣದಲ್ಲಿ ತಮ್ಮ ಹಣ ಮರುಪಾವತಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಕತಾರ್ ಹೂಡಿಕೆ ಪ್ರಾಧಿಕಾರದ ಅಂಗಸಂಸ್ಥೆಯೂ ಸಿಂಗಾಪುರದಲ್ಲಿ ಪ್ರತ್ಯೇಕ ಪ್ರಕರಣ ಮುಂದುವರಿಸಿದೆ.

ಒಂದು ಕಾಲದಲ್ಲಿ ಭಾರತೀಯ ಸ್ಟಾರ್ಟ್‌ಅಪ್ ಜಗತ್ತಿನ ಯಶಸ್ಸಿನ ಪ್ರತೀಕವಾಗಿ ಗುರುತಿಸಿಕೊಂಡಿದ್ದ ಬೈಜು ರವೀಂದ್ರನ್ ಇದೀಗ ಆರ್ಥಿಕ ಬಿಕ್ಕಟ್ಟು, ಹೂಡಿಕೆದಾರರ ಒತ್ತಡ ಹಾಗೂ ಕಾನೂನು ಸವಾಲುಗಳ ನಡುವೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ತೀರ್ಪಿನ ಕುರಿತು ಅವರು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.