ಉಡುಪಿ: ಮೇ 28ರಂದು ಸೋದೆ ಮಠದಿಂದ ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ

ಉಡುಪಿ: ಕೃಷಿ ಪರಂಪರೆ ಮತ್ತು ದೇಶೀ ಭತ್ತದ ತಳಿಗಳ ಸಂರಕ್ಷಣೆಗೆ ಉತ್ತೇಜನ ನೀಡುವಉದ್ದೇಶದಿಂದ ಸೋದೆ ಶ್ರೀ ವಾದಿರಾಜ ಮಠ ಮತ್ತು ಕೃಷಿ ಪ್ರಯೋಗ ಪರಿವಾರ ಸಂಸ್ಥೆಗಳ ಆಶ್ರಯದಲ್ಲಿ ನಾಳೆ (ಮೇ 28) ‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಸೋದೆ ಶ್ರೀ ವಾದಿರಾಜ ಮಠದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಶ್ರೀ ವಿಶ್ವ ವಲ್ಲಭತೀರ್ಥ ಶ್ರೀಪಾದರಿಂದ ‘ಬೊಗಸೆ ಭತ್ತ ಬೀಜ ಪ್ರದಾನ’ ನಡೆಯಲಿದೆ. ರಾಜ್ಯದ 10 ಜಿಲ್ಲೆಗಳ 250ಕ್ಕೂ ಹೆಚ್ಚು ರೈತರು ಭಾಗವಹಿಸಿ ಭತ್ತದ ಬೀಜಪಡೆದು ತಳಿ ಸಂರಕ್ಷಣೆಗೈಯಲ್ಲಿದ್ದಾರೆ ಎಂದರು.

2028ರಿಂದ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯದ ಸಂದರ್ಭದಲ್ಲಿ ಅನ್ನಬ್ರಹ್ಮನೆಂದೇ ಪೂಜಿಸಲ್ಪಡುವ ಉಡುಪಿಯ ಶ್ರೀಕೃಷ್ಣನಿಗೆ ಪ್ರತಿನಿತ್ಯವೂ ಒಂದೊಂದು ಪ್ರತ್ಯೇಕ ತಳಿಯ ಭತ್ತದಿಂದ ಮಾಡಿದ ಅಕ್ಕಿಯ ಮಹಾನೈವೇದ್ಯ ಸಮರ್ಪಿಸುವುದು ಈ ‘ಬೊಗಸೆ ಭತ್ತ ಬೀಜ ಪ್ರದಾನ’ ಯೋಜನೆಯ ಮೂಲ ಉದ್ದೇಶವಾಗಿದೆ. ಸಾವಯವ ಕೃಷಿಕರು ಸಮರ್ಪಿಸುವ ದೇಶೀ ಭತ್ತದ ಅಕ್ಕಿಯ ಅನ್ನವನ್ನು ಮಹಾನೈವೇದ್ಯಕ್ಕೆ ಬಳಸುವ ಸಂಕಲ್ಪ ಮಾಡಲಾಗಿದ್ದು, ಇದಕ್ಕೆ ‘ಶುದ್ಧ ನೈವೇದ್ಯ ಸಮರ್ಪಣಂ’ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.

ರೈತರಿಗೆ ವಿವಿಧ ದೇಶೀ ಭತ್ತದ ಬೀಜಗಳನ್ನು ಉಚಿತವಾಗಿ ವಿತರಿಸಲಾಗುವುದು. ಸುಮಾರು 200 ತಳಿಯ ಭತ್ತದ ಬೀಜ ನೀಡಲಾಗುವುದು. ಕೃಷಿಯಲ್ಲಿ ನೈಸರ್ಗಿಕ ಪದ್ಧತಿಗಳನ್ನು ‘ಉತ್ತೇಜಿಸುವುದು ಹಾಗೂ ಅಳಿವಿನಂಚಿ ನಲ್ಲಿರುವ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಉಳಿಸಲು ಪ್ರೇರೇಪಿಲಾಗುವುದು. ಜತೆಗೆ ಎರಡು ವರ್ಷಗಳ, ಪರ್ಯಾಯದ ಅವಧಿಯಲ್ಲಿ ಎಲ್ಲ ದಿನ ಭಕ್ತರಿಗೂ ಸಾವಯವ ಅಕ್ಕಿಯ ಅನ್ನ ನೀಡುವ ಬಗ್ಗೆ ಚಿಂತಿಸಲಾಗಿದೆ.

500 ಜನ ರೈತರನ್ನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಪ್ರತಿ ದಿನ ನೈವೇದ್ಯ ಮಾಡಲಾದ ಭತ್ತ ತಳಿಯನ್ನು ಬೆಳೆದು ಸರ್ಮಪಿಸುವ ರೈತರನ್ನು ಮಠದಿಂದ ಗೌರವಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರದ ಶ್ರೀವತ್ಸ, ಅರುಣ್, ದಿನೇಶ್ ಇದ್ದರು.