ಯಕ್ಷಗಾನದ ಸೇವೆ ದೇವರ ಸೇವೆ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು
ಉಡುಪಿ: ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಳದ ದಶಾವತಾರ ಐದು ಮೇಳಗಳ ತಿರುಗಾಟದ ದೇವರ ಸೇವೆ ಯಕ್ಷಗಾನ ಕಲೆಯ ಮೇಲೆ ಜನರಿಟ್ಟಿರುವ ಅಪಾರ ಭಕ್ತಿ, ಗೌರವವನ್ನು ಬಿಂಬಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು, ಭಾನುವಾರ ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ದೇವಳದ ದಶಾವತಾರ ಐದು ಮೇಳಗಳ ತಿರುಗಾಟದ ಕೊನೆಯ ಆಟದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂದಾರ್ತಿ ಮೇಳಕ್ಕೆ ಸುಮಾರು 800 ವರ್ಷಗಳಷ್ಟು ಇತಿಹಾಸವಿದೆ. ಇಲ್ಲಿ ದೇವರ ಸೇವೆಯ ಯಕ್ಷಗಾನದ ದೀಪ ನಿರಂತರ ಉರಿಯುತ್ತಿದೆ. ಇಂದು ತುಳುನಾಡಿನ ಕಟೀಲು, ಮಂದಾರ್ತಿ ಸೇರಿದಂತೆ ಅನೇಕ ದೇವಳಗಳ ಯಕ್ಷಗಾನ ಮೇಳಗಳು ಹರಕೆಯ ರೂಪದಲ್ಲಿ ಯಕ್ಷಗಾನವನ್ನು ಪ್ರದರ್ಶಿಸುವ ಮೂಲಕ ಈ ಕಲೆಯ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿವೆ ಎಂದು ಅವರು ಪ್ರಶಂಸಿದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಗಾವಳಿ ಶೀನ ಕುಲಾಲ್ ಅವರಿಗೆ ದಿ.ಹಾರಾಡಿ ರಾಮ ಗಾಣಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂದಾರ್ತಿ ದಶಾವತಾರ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಲಾವಿದರಾದ ಹಾರಾಡಿ ರಮೇಶ್ ಗಾಣಿಗ, ಪೇತ್ರಿ ಶ್ಯಾಮ ನಾಯ್ಕ, ಮೇಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ದೈವಾಧೀನರಾದ ಈಶ್ವರ ಗೌಡ ಮತ್ತು ಸೂರ್ಯ ದೇವಾಡಿಗ ನೀಲಾವರ ಅವರ ಕುಟುಂಬಕ್ಕೆ ತಲಾ 1 ಲಕ್ಷ ಮೊತ್ತದ ಗೌರವ ಧನ ವಿತರಿಸಲಾಯಿತು.
ಹಿರಿಯರಾದ ಶೇಡಿಕೊಡು ವಿಠಲ ಶೆಟ್ಟಿ, ಯಕ್ಷಗಾನ ವಿಮರ್ಶಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಅನುವಂಶಿಕ ಮೊತ್ತೇಸರರಾದ ಎಚ್.ಪ್ರಭಾಕರ ಶೆಟ್ಟಿ, ಎಚ್.ಶಂಭು ಶೆಟ್ಟಿ, ಆರ್.ಶ್ರೀನಿವಾಸ ಶೆಟ್ಟಿ, ಎಚ್. ಜಯರಾಮ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, 5 ಮೇಳಗಳ ಕಲಾವಿದರು ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಶಶಿಧರ ಶೆಟ್ಟಿ ಸಂಚಾರು ನಿರೂಪಿಸಿದರು. ಅಶೋಕ್ ಕುಂದರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ದಶಾವತಾರ ಐದು ಮೇಳಗಳ ಸೇವೆ, ಐದು ರಂಗಸ್ಥಳಗಳಲ್ಲಿ ನಡೆಯಿತು.

















