ರಾಜ್ಯದ ಅರ್ಧದಷ್ಟು ಬೇಕರಿ ತಿನಿಸುಗಳು ತಿನ್ನಲು ಯೋಗ್ಯವಲ್ಲ,ತಿಂಡಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು, ವರದಿ ಬಿಚ್ಚಿಟ್ಟ ಭಯಾನಕ ಸತ್ಯಗಳಿವು!

ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯಾದ್ಯಂತ ಸಂಗ್ರಹಿಸಿದ 35,639 ಆಹಾರದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಿದ್ದರು. ಲ್ಯಾಬ್ ವರದಿಯ ಪ್ರಕಾರ, ಅನೇಕ ಬೇಕರಿ ಉತ್ಪನ್ನಗಳು ಹಾಗೂ ಚಿಪ್ಸ್‌ಗಳಲ್ಲಿ ನಿಷೇಧಿತ ಮತ್ತು ಮಿತಿಮೀರಿದ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತಿದೆ ಎಂಬುದು ದೃಢಪಟ್ಟಿದೆ.

ಆಕರ್ಷಕ ಬಣ್ಣ ಮತ್ತು ಹೊಳಪಿಗಾಗಿ ಬಳಸಲಾಗುತ್ತಿರುವ ಈ ರಾಸಾಯನಿಕಗಳಲ್ಲಿ ಕೆಲವು ಕ್ಯಾನ್ಸರ್‌ಕಾರಕ ಅಂಶಗಳೂ ಇರುವ ಸಾಧ್ಯತೆ ವ್ಯಕ್ತವಾಗಿದೆ. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಆರೋಗ್ಯಕ್ಕೂ ಇಂತಹ ಆಹಾರಗಳು ದೀರ್ಘಾವಧಿಯಲ್ಲಿ ಗಂಭೀರ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ವರದಿ ಬಹಿರಂಗವಾದ ಬಳಿಕ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಿಯಮ ಉಲ್ಲಂಘಿಸಿ ವಿಷಕಾರಿ ಬಣ್ಣಗಳನ್ನು ಬಳಸುವ ಬೇಕರಿಗಳು ಹಾಗೂ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ತಪ್ಪಿತಸ್ಥ ಅಂಗಡಿಗಳನ್ನು ಮುಚ್ಚಿಸುವಂತೆ ಜನರು ಒತ್ತಾಯಿಸಿದ್ದಾರೆ.

ಪೋಷಕರು ಮಕ್ಕಳಿಗೆ ಹೊರಗಿನಿಂದ ಆಹಾರ ಪದಾರ್ಥಗಳನ್ನು ಕೊಡುವ ಮುನ್ನ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಪ್ರತಿಯೊಂದು ಆಹಾರವೂ ಆರೋಗ್ಯಕರವಾಗಿರಲೇಬೇಕು ಎಂಬುದಿಲ್ಲ ಎಂಬುದು ಈ ವರದಿಯಿಂದ ಮತ್ತೆ ಸಾಬೀತಾಗಿದೆ.