ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸುವುದರೊಂದಿಗೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಶೂನ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರಕ್ಷಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿ ಸದಸ್ಯರಿಗೆ ನಡೆದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2013 ರ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಗೌರವಯುತ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಭಯಮುಕ್ತ ವಾತಾವರಣದಲ್ಲಿ ಕೆಲಸ ನಿರ್ವಹಿಸಿದ್ದಲ್ಲಿ ತಮ್ಮ ಒತ್ತಡವನ್ನು ಕುಟುಂಬದವರ ಮೇಲೆ ಹೇರುವುದಿಲ್ಲ. ಇದರಿಂದ ಕುಟುಂಬ ಹಾಗೂ ಕೆಲಸ ಎರಡನ್ನೂ ಖುಷಿಯಿಂದ ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಗಲಿದೆ. PಔSಊ ಅಧಿನಿಯಮವು ಕೇವಲ ಕಡತದಲ್ಲಷ್ಟೇ ಸೀಮಿತವಾಗಿರದೇ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳಿಗೆ ಆಸ್ಪದ ನೀಡಬಾರದು. ಯಾವುದೇ ಹೆಣ್ಣುಮಗಳು ತನ್ನ ಕೆಲಸದ ಸ್ಥಳದಲ್ಲಿ ದೌರ್ಜನ್ಯ ನಡೆದಾಗ ದೂರು ನೀಡಲು ಹಿಂಜರಿಯಬಾರದು ಎಂದ ಅವರು, ಈ ಕಾಯಿದೆಯನ್ನು ಅನುಷ್ಠಾನ ಮಾಡುವಲ್ಲಿ ಎಲ್ಲಾ ಅಧಿಕಾರಿಗಳ ಪಾತ್ರ ಮಹತ್ವದಾಗಿದ್ದು, ಕಾಯ್ದೆಯ ಅನುಷ್ಠಾನದಲ್ಲಿ ಎಡವದೇ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ಮತ್ತು ಗೌರವಯುತ ವಾತಾವರಣ ಕಲ್ಪಿಸುವುದರೊಂದಿಗೆ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವುದು ಈ ಕಾಯಿದೆಯ ಮೂಲ ಉದ್ದೇಶವಾಗಿದೆ. ಪ್ರತಿ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸಿ, ದೂರುಗಳನ್ನು ಗೌಪ್ಯವಾಗಿ ಸ್ವೀಕರಿಸಲು She-ಃox ಅನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದರು.
ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಇಂತಹ ತರಬೇತಿ ಕಾರ್ಯಾಗಾರಗಳು ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ಕೆಲಸದ ಸ್ಥಳದಲ್ಲಿ ಸಮಾನತೆಯನ್ನು ಒದಗಿಸುತ್ತದೆ ಎಂದ ಅವರು, ಪ್ರತಿಯೊಬ್ಬ ಮಹಿಳೆಯು ತಮ್ಮ ರಕ್ಷಣೆಗಾಗಿ ಜಾರಿಗೊಳಿಸಲಾದ ಕಾಯಿದೆ ಹಾಗೂ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ದಾಖಲಾದಲ್ಲಿ ಅವುಗಳಿಗೆ ತಕ್ಷಣವೇ ಸ್ಪಂದಿಸಿ, ಸೂಕ್ತ ಕಾನೂನು ನೆರವು ಒದಗಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2013 ರ ಕುರಿತು ಜನರಲ್ಲಿ ಅರಿವು ಕಡಿಮೆ ಇದೆ. ಸಮಿತಿಗೆ ದೂರು ಬಂದಾಗ ಅದನ್ನು ಯಾವ ರೀತಿಯಲ್ಲಿ ಬಗೆಹರಿಸಬೇಕು ಎಂಬ ಅರಿವು ಸಮಿತಿಯ ಸದಸ್ಯರುಗಳಿಗೆ ಇರಬೇಕು. ಕಾಯಿದೆಯ ಕುರಿತು ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ತಳಮಟ್ಟದಲ್ಲಿ ಅನುಷ್ಠಾನ ಮಾಡುವುದರೊಂದಿಗೆ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆಯ ವಾತಾವರಣ ದೊರಕುವಂತಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆಯಿಶಾ ಸಿಂಗ್ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2013 (POSH ACT Cr ಅಡಿ ಸ್ಥಳೀಯ ದೂರು ಸಮಿತಿ (ಎಲ್.ಸಿ.ಸಿ) ಮತ್ತು ಆಂತರಿಕ ದೂರು ಸಮಿತಿ (ಐ.ಸಿ.ಸಿ) ಯ ರಚನೆ, ಕಾರ್ಯನಿರ್ವಹಣೆ, She.Box ಪೋರ್ಟಲ್ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಅನುರಾಧ ಬಿ ಹಾದಿಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಸಂಗೀತ ಎಂ.ಕೆ ನಿರೂಪಿಸಿ, ವಂದಿಸಿದರು.

















