ನವದೆಹಲಿ: ಸುಪ್ರಿಂ ಕೋರ್ಟ್ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ “ಜಿರಳೆ ಜನತಾ ಪಕ್ಷ” ಕುರಿತ ಆರೋಪಗಳ ತನಿಖೆಯನ್ನು ತುರ್ತು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ Surya Kant ಹಾಗೂ ನ್ಯಾಯಮೂರ್ತಿ ಜೋಯ್ಮಾಲ್ಯ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಕೆ. ಗೋಸ್ವಾಮಿ ಅವರಿಗೆ, “ಈ ವಿಷಯವನ್ನು ಅತಿಯಾಗಿ ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ” ಎಂದು ಪೀಠ ತಿಳಿಸಿತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಜಿರಳೆ ಜನತಾ ಪಕ್ಷ” ಚಟುವಟಿಕೆಗಳ ಕುರಿತು ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರ ಪರ ವಕೀಲರು, ಈ ಸಂಘಟನೆ ದುರುದ್ದೇಶ ಹೊಂದಿದೆ ಎಂದು ವಾದಿಸಿದರು. ಆದರೆ “ಈ ಕ್ಷಣದಲ್ಲಿ ಯಾವುದೇ ಗಂಭೀರ ತುರ್ತು ಪರಿಸ್ಥಿತಿ ಇಲ್ಲ. ನಾವು ವಿಚಾರವನ್ನು ಗಮನಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿಗಳು ಉತ್ತರಿಸಿದರು.
ಈ ವಿವಾದದ ಹಿನ್ನೆಲೆ ಮೇ 15ರಂದು ನಡೆದ ವಿಚಾರಣೆಯಾಗಿದೆ. ಆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿಗಳನ್ನು “ಜಿರಳೆ”ಗಳಿಗೆ ಹೋಲಿಸಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ “ಜಿರಳೆ ಜನತಾ ಪಕ್ಷ” ಎಂಬ ವ್ಯಂಗ್ಯ ಪ್ರಚಾರ ಹುಟ್ಟಿಕೊಂಡಿತ್ತು. ಬಳಿಕ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದ್ದರು.

















