ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ಮುಸ್ಲಿಂ ಸಂಘಟನೆಯಿಂದ ಸರಕಾರಕ್ಕೆ ಆಗ್ರಹ

ನವದೆಹಲಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಜಮೀಯತ್ ಉಲೇಮಾ-ಎ-ಹಿಂದ್‌ (ಅರ್ಶದ್ ಮದನಿ ಬಣ) ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಅವರು ಸರಕಾರವನ್ನು ವಿನಂತಿಸಿದ್ದಾರೆ.

ಅವರ ಈ ಹೇಳಿಕೆಗೆ ದೇಶದ ವಿವಿಧ ಮುಸ್ಲಿಂ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮುಸ್ಲಿಂ ಮುಖಂಡರು ಹಾಗೂ ಸಂಘಟನೆಗಳು ಈ ಪ್ರಸ್ತಾಪವನ್ನು ಸ್ವಾಗತಿಸಿವೆ.

ಗೋಹತ್ಯೆ ವಿಚಾರವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಗೆ ಈ ಕ್ರಮ ಕಡಿವಾಣ ಹಾಕಬಹುದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಈ ವಿಷಯದಲ್ಲಿ ಮುಸ್ಲಿಂ ಸಮುದಾಯದೊಳಗೆ ವಿಶಾಲವಾದ ಸಹಮತ ರೂಪಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅಖಿಲ ಭಾರತ ಮುಸ್ಲಿಂ ಜಮಾಅತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಅವರು ಕೂಡ ಮೌಲಾನಾ ಅರ್ಶದ್ ಮದನಿ ಅವರ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.

ಈ ವಿಷಯವಾಗಿ ಶೀಘ್ರದಲ್ಲೇ ದೆಹಲಿಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಮನವಿ ಪತ್ರವೊಂದನ್ನು ಸಿದ್ಧಪಡಿಸಿ, ಬಳಿಕ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.