ಮೇ 12ರಂದು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಡೆಲ್
ಭೋಪಾಲ್: ನೋಯ್ದಾ ಮೂಲದ ಮಾಡೆಲ್ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಶುಕ್ರವಾರ (ಮೇ.22) ಸೂಚಿಸಿದೆ. ಇದರೊಂದಿಗೆ, ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರವು ಸಮ್ಮತಿ ಸೂಚಿಸಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಟ್ವಿಶಾ ಕುಟುಂಬಕ್ಕೆ ಶುಕ್ರವಾರದಂದು ಒಂದೇ ಬಾರಿಗೆ ಎರಡು ದೊಡ್ಡ ಜಯ ಸಿಕ್ಕಂತಾಗಿದೆ. ಟ್ವಿಶಾ ಶರ್ಮಾ ಅವರು ಮೇ 12ರಂದು ಭೋಪಾಲ್ನಲ್ಲಿರುವ ತಮ್ಮ ಗಂಡನ ಮನೆಯ ಟೆರೇಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಇದು ಆತ್ಮಹತ್ಯೆಯಲ್ಲ, ಇದರ ಹಿಂದೆ ಸಂಚು ಅಡಗಿದೆ ಎಂದು ಟ್ವಿಶಾ ಪೋಷಕರು ಆರೋಪಿಸಿದ್ದರು ಅಲ್ಲದೆ ಸತ್ಯಾಸತ್ಯತೆ ಹೊರಬರುವವರೆಗೆ ಮಗಳ ಅಂತ್ಯಸಂಸ್ಕಾರ ನಡೆಸುವುದಿಲ್ಲವೆಂದು ಪಟ್ಟುಹಿಡಿದಿದ್ದರು ಜೊತೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೆಯೇ ಮೃತದೇಹದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೂ ಮುನ್ನ, ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಭೋಪಾಲ್ನ ಸ್ಥಳೀಯ ನ್ಯಾಯಾಲಯವು ವಜಾಗೊಳಿಸಿತ್ತು. ಕಳೆದ ಮೇ 13 ರಿಂದ ಭೋಪಾಲ್ ಏಮ್ಸ್ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹವನ್ನು ಇಷ್ಟು ದಿನಗಳ ಕಾಲ ಸುರಕ್ಷಿತವಾಗಿ ಸಂರಕ್ಷಿಸಿಡುವ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದ ಕೆಳಹಂತದ ನ್ಯಾಯಾಲಯ, ಮೇ 19 ರಂದು ಮರು ಮರಣೋತ್ತರ ಪರೀಕ್ಷೆಯ ಅರ್ಜಿಯನ್ನು ತಿರಸ್ಕರಿಸಿತ್ತು.
ಆದರೆ, ಸ್ಥಳೀಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕುಟುಂಬಸ್ಥರಿಗೆ ಈಗ ನ್ಯಾಯ ಸಿಕ್ಕಿದೆ. ಮೃತಳ ಕುಟುಂಬದ ಬೇಡಿಕೆಗೆ ಮಣಿದಿರುವ ಹೈಕೋರ್ಟ್ ಎರಡನೇ ಬಾರಿಗೆ ಶವಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಮತ್ತೊಂದೆಡೆ ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿರುವ ಮಧ್ಯಪ್ರದೇಶ ಸರ್ಕಾರ, ತನಿಖೆಯನ್ನು ಸಿಬಿಐಗೆ ವಹಿಸಲು ಗ್ರೀನ್ ಸಿಗ್ನಲ್ ನೀಡಿದೆ.

















