ತಿರುಪತಿ ದರ್ಶನದ ಹೆಸರಿನಲ್ಲಿ ಮಹಿಳೆಗೆ ಪಂಗನಾಮ ಹಾಕಿದ ಸೈಬರ್ ಕಳ್ಳರು: ಹೊಟೇಲ್ ಬುಕ್ಕಿಂಗ್ ಎಂದು ಕಬಳಿಸಿದ್ದು ಬರೋಬ್ಬರಿ ₹4,99,242, ನೀವೂ ಹೀಗೆ ಮೋಸ ಹೋಗಬೇಡಿ

ಮೈಸೂರು: ದೇವರ ದರ್ಶನದ ಕನಸು ಹೊತ್ತು ಹೊರಟಿದ್ದ ಮಹಿಳೆಯೊಬ್ಬರಿಗೆ ಸೈಬರ್ ಖದೀಮರು ಬಲೆ ಬೀಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ತಿರುಪತಿ ಪ್ರವಾಸಕ್ಕೆ ಹೋಟೆಲ್ ಬುಕ್ ಮಾಡಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ 67 ವರ್ಷದ ಮಹಿಳೆ, ನಕಲಿ ಹೋಟೆಲ್ ನಂಬರ್‌ಗೆ ಕರೆ ಮಾಡಿ ಕೊನೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿಯಾಗಿರುವ ಮಹಿಳೆ ತಿರುಪತಿ ಪ್ರವಾಸದ ನಿಮಿತ್ತ ಕಡಿಮೆ ದರದ ಹೋಟೆಲ್ ಹುಡುಕುತ್ತಿದ್ದರು. ಈ ವೇಳೆ ಗೂಗಲ್‌ನಲ್ಲಿ ಕಂಡ “Court Yard Marriott” ಹೆಸರಿನ ನಕಲಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಬುಕ್ಕಿಂಗ್ ಮಾಡಲು ₹5,250 ಶುಲ್ಕ ಪಾವತಿಸಬೇಕು ಎಂದು ಹೇಳಿದ ವಂಚಕ, ಡೆಬಿಟ್ ಕಾರ್ಡ್ ಮಾಹಿತಿ ಕೇಳಿದ್ದಾನೆ. ಮಾಹಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ಮಹಿಳೆಯ ಕೆನರಾ ಬ್ಯಾಂಕ್ ಖಾತೆಯಿಂದ ₹46,386 ಹಣ ಕಡಿತಗೊಂಡಿದೆ.

ಹಣ ಕಡಿತವಾದ ವಿಚಾರ ಕೇಳಿ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದಾಗ, “ರಿಫಂಡ್ ಮಾಡಲು ಅಂತರಾಷ್ಟ್ರೀಯ ಕಾರ್ಡ್ ಮಾಹಿತಿ ಬೇಕು” ಎಂದು ವಂಚಕ ಮತ್ತೊಮ್ಮೆ ನಂಬಿಸಿದ್ದಾನೆ. ಈ ವೇಳೆ ಮಹಿಳೆ ತಮ್ಮ ಮಗನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಪರಿಣಾಮವಾಗಿ ಮಗನ ಕ್ರೆಡಿಟ್ ಕಾರ್ಡ್‌ನಿಂದ ₹2,99,507, ಡೆಬಿಟ್ ಕಾರ್ಡ್‌ನಿಂದ ₹1,15,201 ಹಾಗೂ ಮಹಿಳೆಯ ಕಾರ್ಡ್‌ನಿಂದ ಮತ್ತಷ್ಟು ಹಣ ಕಡಿತವಾಗಿ ಒಟ್ಟು ₹4,99,242 ವಂಚನೆ ನಡೆದಿದೆ.

ಇದು “ಹೋಟೆಲ್ ಬುಕ್ಕಿಂಗ್ ಸ್ಕ್ಯಾಮ್” ಅಥವಾ “ಗೂಗಲ್ ಲಿಸ್ಟಿಂಗ್ ಸ್ಕ್ಯಾಮ್” ಮಾದರಿಯ ವಂಚನೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುಪತಿ, ಪುರಿ, ವಾರಣಾಸಿ ಸೇರಿದಂತೆ ತೀರ್ಥಯಾತ್ರಾ ಸ್ಥಳಗಳಿಗೆ ತೆರಳುವ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಸೈಬರ್ ವಂಚಕರು ಮೋಸ ಮಾಡುತ್ತಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಎಚ್ಚರ ಪಾಲಿಸಿ:

  • ಫೋನ್‌ನಲ್ಲಿ ಯಾರಿಗೂ OTP, CVV, ಕಾರ್ಡ್ ಸಂಖ್ಯೆ ಹಂಚಿಕೊಳ್ಳಬೇಡಿ.
  • ತಿರುಪತಿ ವಸತಿ ಬುಕ್ಕಿಂಗ್‌ಗೆ ಕೇವಲ TTD ಅಧಿಕೃತ ವೆಬ್‌ಸೈಟ್ ಅಥವಾ Tirumala Official ಬಳಸಿ.
  • ಕರ್ನಾಟಕ ಪ್ರವಾಸಿ ಸೌಧ ಬುಕ್ಕಿಂಗ್‌ಗೆ Karnataka Temples Accommodation ಮತ್ತು KSTDC ಬಳಸುವಂತೆ ಸೂಚನೆ.
  • ವಂಚನೆ ನಡೆದ ತಕ್ಷಣ 1930 ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ Cyber Crime Portal ನಲ್ಲಿ ದೂರು ದಾಖಲಿಸಿ.
  • ಬ್ಯಾಂಕ್‌ಗೆ ತಕ್ಷಣ ಮಾಹಿತಿ ನೀಡಿ ಕಾರ್ಡ್ ಬ್ಲಾಕ್ ಮಾಡಿಸಬೇಕು.
  • ಮನೆಯ ಹಿರಿಯರು ಆನ್‌ಲೈನ್ ಬುಕ್ಕಿಂಗ್ ಮಾಡುವಾಗ ಮಕ್ಕಳ ಅಥವಾ ನಂಬಿಕೆಯ ವ್ಯಕ್ತಿಗಳ ಸಹಾಯ ಪಡೆಯುವುದು ಸುರಕ್ಷಿತ