“ನಾಗರಮಠ ಮರಳು ದಕ್ಕೆ: ಲೋಕಾಯುಕ್ತ ಸೂಚನೆ ಮೇರೆಗೆ ತಜ್ಞರ ಸಮಿತಿ ಪರಿಶೀಲನೆ”

ಉಡುಪಿ: ಉಡುಪಿ ಜಿಲ್ಲೆಯ ಕೋಟ ಸಮೀಪದ ನಾಗರಮಠ ಮರಳು ದಕ್ಕೆಯಲ್ಲಿ ಅಕ್ರಮ ಮರಳುಗಾರಿಕೆ ಆರೋಪ ಗಂಭೀರ ಸ್ವರೂಪ ಪಡೆದಿದೆ. ಸ್ಥಳೀಯರ ದೂರಿನ ಮೇರೆಗೆ ಕರ್ನಾಟಕ ಲೋಕಾಯುಕ್ತ ಸೂಚನೆಯಂತೆ ತಜ್ಞರ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಿದೆ.
ಬಾರಕೂರು ಸಮೀಪದ ಹೊಸಾಳ ಗ್ರಾಮದ ಸೀತಾನದಿ ವ್ಯಾಪ್ತಿಯಲ್ಲಿ ಮರಳುಗಾರಿಕೆ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಹಾಗೂ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಸ್ಥಳೀಯರಾದ ಗಣೇಶ್ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರಿನ ಗಂಭೀರತೆಯನ್ನು ಪರಿಗಣಿಸಿದ ಲೋಕಾಯುಕ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಿ ಸ್ಥಳ ಪರಿಶೀಲನೆಗೆ ಆದೇಶಿಸಿದ್ದರು. ಅದರಂತೆ ಸಮಿತಿ ಮೇ 21ರಂದು ದೋಣಿ ಮೂಲಕ ಮರಳುಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಮಿತಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಭೂ ದಾಖಲೆ ಇಲಾಖೆ, ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನ ಪರಿಸರ ಹಾಗೂ ಭೂವಿಜ್ಞಾನ ವಿಭಾಗದ ತಜ್ಞರು ಮತ್ತು ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು.
ಮರಳುಗಾರಿಕೆಯಲ್ಲಿ ನಡೆದಿರುವ ಅಕ್ರಮಗಳ ಸ್ವರೂಪ, ಪರಿಸರ ಹಾನಿ, ಪರಿಸರ ವ್ಯತ್ಯಯ ಹಾಗೂ ಸರ್ಕಾರದ ಖಜಾನೆಗೆ ಸಂಭವಿಸಿರುವ ಆರ್ಥಿಕ ನಷ್ಟದ ಪ್ರಮಾಣವನ್ನು ಅಂದಾಜು ಮಾಡಿ ವರದಿ ನೀಡುವಂತೆ ಲೋಕಾಯುಕ್ತ ಸೂಚನೆ ನೀಡಿತ್ತು.
ಈ ಹಿಂದೆ ಉಡುಪಿ ಲೋಕಾಯುಕ್ತ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಕೂಡ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವುದಾಗಿ ಉಲ್ಲೇಖಿಸಲಾಗಿತ್ತು. ಹಿರಿಯ ಅಧಿಕಾರಿಗಳು ಸ್ವತಂತ್ರ ಪರಿಶೀಲನೆ ನಡೆಸದ ಬಗ್ಗೆ ಲೋಕಾಯುಕ್ತ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಸ್ಥಳ ಪರಿಶೀಲನೆ ನಡೆಸಿದ ತಜ್ಞರ ಸಮಿತಿ ಸಿದ್ಧಪಡಿಸಿರುವ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ನಾಗರಮಠ ಮರಳು ದಕ್ಕೆಯ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.