ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲನೆ ಮತ್ತು ಮಹಜರು ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣದಲ್ಲಿ ಸಾಕ್ಷಿದಾರ ಹಾಗೂ ದೂರುದಾರನಾಗಿ ಗುರುತಿಸಿಕೊಂಡಿರುವ ಚಿನ್ನಯ್ಯ ಮೊದಲಿಗೆ ನ್ಯಾಯಾಲಯಕ್ಕೆ ತಂದಿದ್ದ ಮಾನವನ ತಲೆಬುರುಡೆಯನ್ನು ಇದೇ ಬಂಗ್ಲೆಗುಡ್ಡೆ ಪ್ರದೇಶದಿಂದ ತೆಗೆದಿರುವುದಾಗಿ ಹೇಳಲಾಗಿತ್ತು. ಈ ಹಿನ್ನೆಲೆ, ಘಟನೆಯ ಮರುಸೃಷ್ಟಿ (reconstruction) ನಡೆಸುವ ಉದ್ದೇಶದಿಂದ ಎಸ್‌ಐಟಿ ತಂಡ ಮತ್ತೆ ಕಾರ್ಯಾಚರಣೆಗೆ ಇಳಿದಿದೆ.

ಈ ಪ್ರಕರಣದಲ್ಲಿ ಸೌಜನ್ಯಾಳ ಮಾವ ವಿಠಲ ಗೌಡ ಹಾಗೂ ಬಂಟ್ವಾಳ ನಿವಾಸಿ ಪ್ರದೀಪ್ ಕುಲಾಲ್ ಅವರು ತಲೆಬುರುಡೆ ತೆಗೆದ ಸ್ಥಳದಲ್ಲಿ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದ ಘಟನೆ ಕೂಡ ತನಿಖೆಯ ಭಾಗವಾಗಿದೆ. ಈ ಸಂಬಂಧ ಮೇ 21ರಂದು ಮಧ್ಯಾಹ್ನ ಸುಮಾರು 2:40ಕ್ಕೆ ಎಸ್‌ಐಟಿ ಅಧಿಕಾರಿಗಳು ಪ್ರದೀಪ್ ಕುಲಾಲ್ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಪರಿಶೀಲನೆ ನಡೆಸಿದರು.
ಬೆಂಗಳೂರುದಿಂದ ಬಂದ ಎಫ್‌ಎಸ್‌ಎಲ್ ತಜ್ಞರು ಹಾಗೂ ಸೋಕೋ (Scene of Crime Officer) ತಂಡದವರು ಸ್ಥಳವನ್ನು ಪರಿಶೀಲಿಸಿ, ನಿಖರ ಸ್ಥಳದ ಬಗ್ಗೆ ವರದಿ ಸಿದ್ಧಪಡಿಸುತ್ತಿದ್ದಾರೆ. ಆರಂಭದಲ್ಲಿ ನಡೆದಿದ್ದ ಮಹಜರು ಸಮರ್ಪಕವಾಗಿರಲಿಲ್ಲ ಎಂಬ ಕಾರಣಕ್ಕೆ ಇದೀಗ ಮತ್ತೊಮ್ಮೆ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

















