ಮೇ 25 ರವರೆಗೆ ಸಮುದ್ರಕ್ಕೆ ಇಳಿಯಬೇಡಿ,ಕರಾವಳಿಯ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ!

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೇ 25 ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈಗಾಗಲೇ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿರುವವರು ತಕ್ಷಣ ಸುರಕ್ಷಿತವಾಗಿ ದಡ ಸೇರಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಹವಾಮಾನ ಇಲಾಖೆಯ ಅಧಿಕೃತ ಮಾಹಿತಿಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ಮೇ 20ರಿಂದ 22ರವರೆಗೆ ಕರ್ನಾಟಕ–ಕೇರಳ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

ಇದೇ ವೇಳೆ ನೈರುತ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ, ವಿಶೇಷವಾಗಿ ಸೊಮಾಲಿಯಾ ಕರಾವಳಿಯ ಸುತ್ತಮುತ್ತ ಗಾಳಿಯ ವೇಗ 65 ಕಿ.ಮೀ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಅಲ್ಲದೆ ಮನ್ನಾರ್ ಕೊಲ್ಲಿ, ದಕ್ಷಿಣ ಬಂಗಾಳ ಕೊಲ್ಲಿಯ ನೈರುತ್ಯ ಮತ್ತು ಆಗ್ನೇಯ ಭಾಗಗಳು, ಅಂಡಮಾನ್ ಸಮುದ್ರ ಪ್ರದೇಶ, ಶ್ರೀಲಂಕಾ ಕರಾವಳಿ ಹಾಗೂ ನೈರುತ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿಯೂ ಗಾಳಿ ತೀವ್ರತೆ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಇದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಹಾಗೂ ಕರಾವಳಿ ಭಾಗದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.