ಜಾಗತಿಕ ಸಾಮಾಜಿಕ ಮಾಧ್ಯಮ ದೈತ್ಯ Meta Platforms ಕಂಪನಿಯು ಭಾರೀ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸುಮಾರು 8,000 ಉದ್ಯೋಗಿಗಳನ್ನು, ಅಂದರೆ ಕಂಪನಿಯ ಒಟ್ಟು ಸಿಬ್ಬಂದಿಯಲ್ಲಿ ಶೇಕಡಾ 10 ರಷ್ಟು ಮಂದಿಯನ್ನು ಮೇ 20ರಂದು ವಜಾಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.
ಕೃತಕ ಬುದ್ಧಿಮತ್ತೆ (AI) ಯುಗಕ್ಕೆ ವೇಗವಾಗಿ ಹೊಂದಿಕೊಳ್ಳುವ ಉದ್ದೇಶದಿಂದ ಕಂಪನಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಸಿಂಗಪುರದಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, The New York Times ಈ ಕುರಿತು ಮಾಹಿತಿ ನೀಡಿದೆ.
ಸ್ಥಳೀಯ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ ಸುಮಾರು 4 ಗಂಟೆಗೆ ಉದ್ಯೋಗಿಗಳಿಗೆ ವಜಾ ಕುರಿತ ಇಮೇಲ್ಗಳು ಕಳುಹಿಸಲಾಗಿವೆ. ಬ್ರಿಟನ್, ಅಮೆರಿಕ ಸೇರಿದಂತೆ ಇತರೆ ದೇಶಗಳ ಉದ್ಯೋಗಿಗಳಿಗೂ ಅಲ್ಲಿನ ಕಾಲಮಾನಕ್ಕೆ ಅನುಗುಣವಾಗಿ ಮಾಹಿತಿ ನೀಡಲಾಗುತ್ತಿದೆ.
ಇದರ ಜೊತೆಗೆ ಇನ್ನೂ ಸುಮಾರು 7,000 ಉದ್ಯೋಗಿಗಳನ್ನು ಹೊಸ AI ಉಪಕ್ರಮಗಳಿಗೆ ಮರು ನಿಯೋಜನೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಪ್ರಸ್ತುತ ಮಾನವರು ನಿರ್ವಹಿಸುವ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲ AI ಏಜೆಂಟ್ಗಳ ಅಭಿವೃದ್ಧಿಗೆ ಕಂಪನಿ ಹೆಚ್ಚಿನ ಒತ್ತು ನೀಡುತ್ತಿದೆ.
ಇದಕ್ಕೂ ಮುನ್ನ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ Janelle Gale ಈ ವಾರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಈ ದೊಡ್ಡ ಮಟ್ಟದ ಉದ್ಯೋಗ ಕಡಿತ ಬೆಳಕಿಗೆ ಬಂದಿದೆ.

















