ಉಡುಪಿ: ಟ್ಯಾಂಕರ್-ಸ್ಕೂಟರ್ ನಡುವೆ ಅಪಘಾತ: ಸವಾರ ಮೃತ್ಯು

ಪಡುಬಿದ್ರಿ: ನೀರಿನ ಟ್ಯಾಂಕರ್ ಹಾಗೂ ಸ್ಕೂಟರ್ ಮಧ್ಯೆ ಮೇ 19ರಂದು ಬೆಳಗ್ಗೆ ಎಲ್ಲೂರು ಗ್ರಾಮದ ಕಂಚುಗಾರಕೇರಿ ಬಸ್ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಪಣಿಯೂರು ಸೆಂಟರ್ ನಿವಾಸಿ ಕೃಷ್ಣ ಮೂಲ್ಯ(22) ಎಂದು ಗುರುತಿಸಲಾಗಿದೆ. ಉಚ್ಚಿಲ ಕಡೆಯಿಂದ ಬರುತ್ತಿದ್ದ ನೀರಿನ ಟ್ಯಾಂಕರ್, ಯಾವುದೇ ಸೂಚನೆ ನೀಡದೇ ಏಕಾಏಕಿ ರಸ್ತೆಯ ಬಲಬದಿಗೆ ಕಂಚುಗಾರಕೇರಿಗೆ ಹೋಗುವ ಕಾಂಕ್ರೀಟ್ ರಸ್ತೆಗೆ ತಿರುಗಿಸಿದ್ದು, ಇದರ ಪರಿಣಾಮ ಟ್ಯಾಂಕರ್ ಹಿಂದೆ ಉಚ್ಚಿಲ ಕಡೆಯಿಂದ ಎಲ್ಲೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಟ್ಯಾಂಕರ್‌ನ ಹಿಂಬದಿಯ ಚಕ್ರಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಸವಾರ ಸ್ಕೂಟರ್ ಸಮೇತ ರಸ್ತೆ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಉಡುಪಿ ಜಿಲ್ಲಾಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.