ಬಜೆ ಅಣೆಕಟ್ಟಿಗೆ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ

ಉಡುಪಿ ನಗರಸಭೆಯ ಕುಡಿಯುವ ನೀರಿನ ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.

ಬಜೆ ಅಣೆಕಟ್ಟು ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಬಗ್ಗೆ ಚರ್ಚೆ ನಡೆಸಿ ಉಡುಪಿ ನಗರದ ಜನತೆಗೆ ನಿರಂತರ ನೀರು ಸರಬರಾಜಿಗೆ ಯಾವುದೇ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.

ವಾರಾಹಿ ಯೋಜನೆಯ ಮೂಲಕವೂ ನಗರಕ್ಕೆ ನೀರು ಸರಬರಾಜಾಗುತ್ತಿದ್ದು, ಬಜೆ ಅಣೆಕಟ್ಟಿನಲ್ಲಿ ಕಳೆದ ವರ್ಷಕ್ಕಿಂತ ನೀರಿನ ಲಭ್ಯತೆ ಕಡಿಮೆ ಇದ್ದು, ಉಡುಪಿ ನಗರ ಭಾಗಕ್ಕೆ ನಿರಂತರ ನೀರು ಪೂರೈಕೆಗೆ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಕಾರ್ಯ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ, ಘಟಕವನ್ನು ಉತ್ತಮವಾಗಿ ನಿರ್ವಹಿಸಿ ಉಡುಪಿ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರು ಸರಬರಾಜಿಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಶ್ರೀ ಮಹಾಂತೇಶ್ ಹಂಗರಗಿ, ನಗರಸಭೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಮಾಜಿ ಸದಸ್ಯರಾದ ಶ್ರೀ ಗಿರೀಶ್ ಅಂಚನ್, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ದುರ್ಗಾ ಪ್ರಸಾದ್, ಸಹಾಯಕ ಅಭಿಯಂತರ ಶ್ರೀ ಚೇತನ್, ವಾರಾಹಿ ಯೋಜನೆಯ ಶ್ರೀ ಆರ್ಕೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.