ಮಂಗಳೂರು, ನಕಲಿ ಪಾಸ್‌ಪೋರ್ಟ್‌ ಜಾಲಭೇದನೆ: ಹಲವರ ವಿರುದ್ಧ ಕ್ರಿಮಿನಲ್‌ ಪ್ರಕರಣ

ಮಂಗಳೂರು: ಬೇರೊಬ್ಬರ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಪಾಸ್‌ಪೋರ್ಟ್‌ ಸೃಷ್ಟಿಸಿದ ವಂಚನಾ ಜಾಲವನ್ನು ಸಿ.ಎಸ್‌.ಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ನಿವಾಸಿಗಳಾದ ಪ್ರೀತಾ ಡಿ.ಸೋಜಾ, ಪ್ರೇಮ್‌ ಡಿ.ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪಗಳಡಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಪೊಲೀಸರಿಗೆ ಲಭಿಸಿದ ಗೌಪ್ಯ ಮಾಹಿತಿಯಂತೆ, ಯಶೋಧ ಕೇಶವ ಎಂಬ ಮಹಿಳೆಯ ಹೆಸರಿನಲ್ಲಿ ಮತ್ತೊಬ್ಬ ಮಹಿಳೆ ಪಾಸ್‌ಪೋರ್ಟ್‌ ಪಡೆದು ವಿದೇಶಕ್ಕೆ ಪ್ರಯಾಣಿಸಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ ಸಿ.ಎಸ್‌.ಬಿ ಅಧಿಕಾರಿಗಳಿಗೆ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.

ಪರಿಶೀಲನೆ ವೇಳೆ ಪಾಸ್‌ಪೋರ್ಟ್‌ನಲ್ಲಿ ಹೆಸರು ಹಾಗೂ ವಿಳಾಸ ಯಶೋಧ ಕೇಶವ ಅವರದ್ದಾಗಿದ್ದರೂ, ಅದರಲ್ಲಿ ಬಳಸಲಾಗಿದ್ದ ಭಾವಚಿತ್ರ ಪ್ರೀತಾ ಡಿ.ಸೋಜಾ ಅವರದ್ದಾಗಿದೆ ಎಂಬುದು ಪತ್ತೆಯಾಗಿದೆ. ಪ್ರೀತಾ ಡಿ.ಸೋಜಾ ಅವರನ್ನು ಅಕ್ರಮವಾಗಿ ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಈ ಸಂಪೂರ್ಣ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕೃತ್ಯದ ಪ್ರಮುಖ ಸೂತ್ರಧಾರ ಉಳ್ಳಾಲ ಮೂಲದ ವ್ಯಕ್ತಿಯಾಗಿದ್ದು, ನಕಲಿ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗಿದೆ. ಯಶೋಧ ಕೇಶವ ಅವರ ಶೈಕ್ಷಣಿಕ ದಾಖಲೆಗಳು, ವಿಳಾಸದ ಪುರಾವೆಗಳು ಹಾಗೂ ಇತರ ಅಧಿಕೃತ ದಾಖಲೆಗಳನ್ನು ಬಳಸಿಕೊಂಡು ನಕಲಿ ಪಾಸ್‌ಪೋರ್ಟ್‌ ಸೃಷ್ಟಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಅಕ್ರಮ ಪಾಸ್‌ಪೋರ್ಟ್‌ ಬಳಸಿ ಪ್ರೀತಾ ಡಿ.ಸೋಜಾ ಅವರು 2020ರ ಮಾರ್ಚ್‌ 17ರಂದು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ Chhatrapati Shivaji Maharaj International Airport ಮೂಲಕ ವಿದೇಶಕ್ಕೆ ತೆರಳಿರುವುದು ಪತ್ತೆಯಾಗಿದೆ. ಈ ಕುರಿತು ಸಿ.ಎಸ್‌.ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.