ಕೊಡವೂರು: ಶ್ರೀ ಶಂ ಕುಣಿತ ಭಜನಾ ಮಂಡಳಿಯಿಂದ ಗುರುಗಳಿಗೆ ಭಾವಪೂರ್ಣ ‘ಗುರುವಂದನೆ’

ಕೊಡವೂರು: ಸ್ಥಳೀಯ ಮಕ್ಕಳಲ್ಲಿ ಭಕ್ತಿ ಮತ್ತು ಸಂಸ್ಕಾರವನ್ನು ಬಿತ್ತುತ್ತಿರುವ ಲಕ್ಷ್ಮೀ ನಗರ ಗರ್ಡೆಯ ಶ್ರೀ ಶಂ ಕುಣಿತ ಭಜನಾ ಮಂಡಳಿಯ ವತಿಯಿಂದ ಭಜನಾ ಗುರುಗಳಾದ ಶ್ರೀ ನಿತ್ಯಾನಂದ ಕಬ್ಯಾಡಿ ಅವರಿಗೆ ಭಾನುವಾರ (ದಿನಾಂಕ 10-05-2026) ಗೌರವಪೂರ್ವಕ ‘ಗುರುವಂದನಾ’ ಕಾರ್ಯಕ್ರಮ ನಡೆಯಿತು.

ಸಂಸ್ಕಾರದ ಹಾದಿಯಲ್ಲಿ ಭಜನಾ ಮಂಡಳಿ ಕಳೆದ ಏಳು ವರ್ಷಗಳ ಹಿಂದೆ ಲಕ್ಷ್ಮೀ ನಗರ ಗರ್ಡೆಯ ಶಿವಾಜಿ ಪಾರ್ಕ್ ಪರಿಸರದಲ್ಲಿ ಸ್ಥಳೀಯ ಮಕ್ಕಳಿಗೆ ಭಜನೆಯನ್ನು ಕಲಿಸುವ ಉದಾತ್ತ ಉದ್ದೇಶದಿಂದ ಈ ತಂಡವನ್ನು ರಚಿಸಲಾಗಿತ್ತು. ಮಕ್ಕಳು ಮತ್ತು ಸ್ಥಳೀಯರಲ್ಲಿ ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಚಿಕ್ಕ ವಯಸ್ಸಿನಿಂದಲೇ ಮೂಡಿಸುವ ನಿಟ್ಟಿನಲ್ಲಿ ಈ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ.

ಪ್ರಸ್ತುತ ಈ ತಂಡವು ವಿವಿಧ ದೇವಸ್ಥಾನಗಳು, ಭಜನಾ ಮಂದಿರಗಳು, ಗೃಹಪ್ರವೇಶ ಹಾಗೂ ಮದರಂಗಿ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಭಜನಾ ಸೇವೆ ಸಲ್ಲಿಸುತ್ತಾ ಬಂದಿದೆ.ಗುರು ಗೌರವ ಸ್ಥಳೀಯರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತವಾಗಿ ಭಜನಾ ತರಬೇತಿ ನೀಡುತ್ತಿರುವ ಗುರುಗಳಾದ ನಿತ್ಯಾನಂದ ಕಬ್ಯಾಡಿ ಅವರ ಸೇವೆಯನ್ನು ಸ್ಮರಿಸಿ, ಮಂಡಳಿಯ ಸದಸ್ಯರು ಅವರನ್ನು ಆತ್ಮೀಯವಾಗಿ ಗೌರವಿಸಿದರು.

ಭಜನೆಯಿಂದ ಸನ್ಮಾರ್ಗ: ವಿಜಯ್ ಕೊಡವೂರು:

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿಜಯ್ ಕೊಡವೂರು ಅವರು “ಮಕ್ಕಳು ಭಜನೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಮನಸ್ಸು ದೇವರೆಡೆಗೆ ವಾಲಿ, ದುಶ್ಚಟಗಳಿಂದ ದೂರವಿರುತ್ತಾರೆ.

ಭಜನೆಯು ಮಕ್ಕಳಲ್ಲಿ ಭಕ್ತಿಯನ್ನು ಹೆಚ್ಚಿಸುವುದಲ್ಲದೆ, ತಂದೆ-ತಾಯಿ ಹಾಗೂ ಹಿರಿಯರ ಮೇಲೆ ಗೌರವ ಭಾವನೆ ಬೆಳೆಯುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.