ಉಡುಪಿ: ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗಬೇಕಾದರೆ ತರಗತಿ ಒಳಗಿನ ಪಾಠಗಳ ಜತೆಗೆ ಅವರನ್ನು ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸಬೇಕು. ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ, ಕಲೆ ಮತ್ತು ಸಂಸ್ಕೃತಿಗಳ ವಿಚಾರಗಳನ್ನು ಬೆಳೆಸಿ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದ್ದದು ಎಂದು ಜಿಲ್ಲೆಯ ಶಾಸಕರು ಹಾಗೂ ಕಾಲೇಜು ಅಭಿವದ್ಧಿ ಸಮಿತಿಯ ಅಧ್ಯಕ್ಷರು ಯಶ್‌ಪಾಲ್ ಎ ಸುವರ್ಣ ಅಬಿಪ್ರಾಯಪಟ್ಟರು.
ಅವರು ಜಿಲ್ಲೆಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ .ಡಾ ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿಯೇ ಮಾನವೀಯತೆ, ಸಮಾಜ ಸೇವೆ ಮತ್ತು ರಾಷ್ಟ್ರೀಯತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅದಾನಿ ಗ್ರೂಪ್‌ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಕಿಶೋರ್ ಆಳ್ವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸೃಜನಶೀಲತೆಯಂತಹ ಗುಣವನ್ನು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ಅನ್ವಯಿಸಿಕೊಳ್ಳುವುದರಿಂದ ವಿಶೇಷ ಸಾಧನೆಯನ್ನು ಮಾಡಲು ಸಾಧ್ಯ. ಸ್ಪರ್ಧಾತ್ಮಕ ಈ ಯುಗದಲ್ಲಿ ಮುಂದುವರಿಯಲು ಪ್ರತಿಯೊಂದು ಕೆಲಸದಲ್ಲಿಯೂ ಸೃಜನಶೀರಾಗಿರುವುದು ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಾಡೋಜ ಡಾ. ಜಿ ಶಂಕರ್ ಅವರ ಪುತ್ರಿ ಶ್ಯಾಮಿಲಿ ನವೀನ್ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋಜನ್ ಕೆ.ಜಿ ಕಾಲೇಜಿನ ವಾರ್ಷಿಕ ವರದಿ – 2026ನ್ನು ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಕ್ರೀಡೆ, ರೇಂಜರ್ಸ್ ಮತ್ತು ಎನ್.ಸಿ.ಸಿ ಯಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಕೃಷ್ಣ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ನಿಕೇತನ, ಐಕ್ಯೂಎಸಿ ಸಂಚಾಲಕರು ಡಾ. ಶ್ರೀಮತಿ ಅಡಿಗ, ದೈಹಿಕ ಶಿಕ್ಷಣ ನಿರ್ದೇಶಕರು ಡಾ. ರಾಮಚಂದ್ರ ಪಾಟ್ಕರ್, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಕೀರ್ತಿ ಶೆಟ್ಟಿ, ಸುಮನ, ಸ್ವೀಕೃತಿ ರಾವ್, ಶರಣ್ಯ, ಉಷಾ ಮತ್ತು ಸುಚಿತ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶರತ್ ಕುಮಾರ್ ನಿರೂಪಿಸಿದರು. ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ರಾಜೇಂದ್ರ ಕೆ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಂಜುನಾಥ್ ವಂದಿಸಿದರು.

















