ಟೊಮೆಟೊ ಬೇಗ ಹಾಳಾಗುತ್ತಿದೆಯೇ? ಹೀಗೆ ಮಾಡಿದರೆ ವಾರಗಟ್ಟಲೇ ಫ್ರೆಶ್ ಆಗಿರುತ್ತದೆ!

ಎಲ್ಲರ ಮನೆಗಳಲ್ಲೂ ಟೊಮ್ಯಾಟೋ ಒಂಥರಾ ಆಪದ್ಭಾಂಧವ ಇದ್ದ ಹಾಗೆ. ಬೇರೆ ಯಾವುದೇ ತರಕಾರಿ ಇಲ್ಲದಿದ್ದರೂ ತೊಂದರೆ ಇಲ್ಲ ಟೊಮ್ಯಾಟೋ ಒಂದಿದ್ದರೆ ದಿಢೀರ್ ಅಡುಗೆ ತಯಾರಿಸಬಹುದು. ಹಾಗಾಗೇ ಪ್ರತಿಯೊಬ್ಬರ ಮನೆಯ ಅಡುಗೆಯಲ್ಲೂ ಟೊಮೆಟೊ ಪ್ರಮುಖ ಸ್ಥಾನ ಪಡೆದಿದೆ. ಸಾಂಬಾರ್, ದಾಲ್, ಕರಿ ಸೇರಿದಂತೆ ಬಹುತೇಕ ಎಲ್ಲಾ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಟೊಮೆಟೊ ಇಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ.

ಆದರೆ ಗೃಹಿಣಿಯರಿಗೆ ಟೊಮ್ಯಾಟೋ ಕೊಳೆತು ಹೋಗದಂತೆ ವಾರಗಟ್ಟಲೇ ಸಂರಕ್ಷಿಸಿಟ್ಟಿಕೊಳ್ಳುವುದೇ ಒಂದು ದೊಡ್ಡ ತಲೆಬಿಸಿ. ಟೊಮೆಟೊದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳಿದ್ದು, ಪ್ರತಿದಿನದ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯ ಅಂಶಗಳು ದೊರೆಯುತ್ತವೆ.

ಟೊಮೆಟೊ ಹೆಚ್ಚು ದಿನ ಫ್ರೆಶ್ ಆಗಿರಲು ಕೆಲವು ಸರಳ ವಿಧಾನಗಳು

  • ಟೊಮೆಟೊ ಖರೀದಿಸುವಾಗ ಸ್ವಲ್ಪ ಗಟ್ಟಿಯಾಗಿರುವ ಹಾಗೂ ಹೆಚ್ಚು ಮಾಗದ ಟೊಮೆಟೊಗಳನ್ನು ಆರಿಸಬೇಕು.
  • ತುಂಬಾ ಮಾಗಿದ ಟೊಮೆಟೊಗಳನ್ನು ಬೇಗ ಬಳಸುವುದು ಉತ್ತಮ.
  • ಸಂಗ್ರಹಿಸುವಾಗ ಟೊಮೆಟೊಗಳ ತೊಟ್ಟಿನ ಭಾಗವನ್ನು ಕೆಳಮುಖವಾಗಿ ಇಡಬೇಕು. ಇದರಿಂದ ಗಾಳಿ ಹಾಗೂ ತೇವಾಂಶ ಕಡಿಮೆಯಾಗಿದ್ದು, ಟೊಮೆಟೊ ಬೇಗ ಹಾಳಾಗುವುದನ್ನು ತಡೆಯಬಹುದು.
  • ಪೂರ್ಣವಾಗಿ ಹಣ್ಣಾಗದ ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಇದು ಟೊಮೆಟೊಗಳ ನೈಸರ್ಗಿಕ ರುಚಿ ಮತ್ತು ಪರಿಮಳವನ್ನು ಕಡಿಮೆ ಮಾಡಬಹುದು. ಸಂಪೂರ್ಣವಾಗಿ ಹಣ್ಣಾದ ಬಳಿಕ ಮಾತ್ರ ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮ.
  • ಟೊಮೆಟೊಗಳನ್ನು ಗಾಳಿಯಾಡುವ ಬುಟ್ಟಿಯಲ್ಲಿ ಇಟ್ಟು, ಒಂದರ ಮೇಲೊಂದು ಜೋಡಿಸದೇ ಇರಿಸುವುದು ಮುಖ್ಯ. ಹೆಚ್ಚು ಒತ್ತಡದಿಂದ ಕೆಳಭಾಗದ ಟೊಮೆಟೊಗಳು ಬೇಗ ಕೊಳೆಯುವ ಸಾಧ್ಯತೆ ಇರುತ್ತದೆ.
  • ತೊಳೆದ ನಂತರ ಟೊಮೆಟೊಗಳನ್ನು ಸಂಪೂರ್ಣವಾಗಿ ಒಣಗಿಸಬೇಕು. ನೀರಿನ ತೇವಾಂಶ ಉಳಿದಿದ್ದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗಿ, ಟೊಮೆಟೊ ಬೇಗ ಹಾಳಾಗಬಹುದು.
  • ಹಸಿರು ಟೊಮೆಟೊಗಳನ್ನು ಪೇಪರ್ ಕವರ್‌ನಲ್ಲಿ ಇಟ್ಟು ಹೊರಗೆ ಇರಿಸಿದರೆ ಅವು ನೈಸರ್ಗಿಕವಾಗಿ ಹಣ್ಣಾಗಿ ಹೆಚ್ಚು ದಿನ ತಾಜಾ ಆಗಿರುತ್ತವೆ.

ಈ ಸರಳ ಟಿಪ್ಸ್ ಅನುಸರಿಸಿದರೆ ಟೊಮೆಟೊಗಳನ್ನು ಹೆಚ್ಚು ದಿನ ಫ್ರೆಶ್ ಆಗಿ ಉಳಿಸಿಕೊಂಡು ಹಣ ಮತ್ತು ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು.