ಧಾರವಾಡದ ಅಪೂಸ್‌ಗೆ ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್, ಸಿಂಗಾಪುರಕ್ಕೆ 2 ಟನ್ ರಫ್ತು, ರೈತರಿಗೆ ಭರ್ಜರಿ ಲಾಭ

ಬೆಂಗಳೂರು: ಪೇಡಾ ನಗರಿ ಧಾರವಾಡದ ಮಾವಿನ ಸುವಾಸನೆ ಇದೀಗ ವಿದೇಶಿಗರ ಮನಸೆಳೆಯುತ್ತಿದೆ. ಮಾವಿನಹಣ್ಣುಗಳ ರಾಜ ಎಂದೇ ಖ್ಯಾತಿಯಾಗಿರುವ ಅಪೂಸ್ ಮಾವು ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದ್ದು, ಧಾರವಾಡದ ಅಪೂಸ್ ಮಾವು ವಿದೇಶಿ ಗ್ರಾಹಕರ ಬಾಯಿ ಚಪ್ಪರಿಸುವಂತೆ ಮಾಡಿದೆ.

ಈ ಬಾರಿ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆ ಬೆಳೆದಿದ್ದು, ಮಾರುಕಟ್ಟೆ ವಿಸ್ತರಣೆ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಇಳುವರಿ ಸಿಗದೆ ರೈತರು ಸಂಕಷ್ಟ ಅನುಭವಿಸಿದ್ದರೂ, ಲಭ್ಯವಾದ ಅಲ್ಪ ಪ್ರಮಾಣದ ಫಸಲಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ಧಾರವಾಡದ ಅಪೂಸ್ ಮಾವಿಗೆ ಸಿಂಗಾಪುರ, ಮಲೇಶಿಯಾ, ಆಸ್ಟ್ರೇಲಿಯಾ, ಜಪಾನ್, ಥೈಲ್ಯಾಂಡ್ ಹಾಗೂ ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಬೇಡಿಕೆ ಹೆಚ್ಚಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಧಾರವಾಡ ಮಾವಿನ ರುಚಿ ಮತ್ತು ಗುಣಮಟ್ಟಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ಇದಲ್ಲದೆ, ಜಿಲ್ಲೆಯ ಮಾವು ಬೆಳೆಗಾರ ಪ್ರಮೋದ್ ಗಾಂವಕರ್ ಅವರು ಈಗಾಗಲೇ 2 ಟನ್ ಮಾವುಗಳನ್ನು ಸಿಂಗಾಪುರಕ್ಕೆ ರಫ್ತು ಮಾಡುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಇಳುವರಿ ಕಡಿಮೆಯಿದ್ದರೂ ಮಾರುಕಟ್ಟೆಯಲ್ಲಿ ಪ್ರತಿ ಡಜನ್ ಅಪೂಸ್ ಮಾವಿಗೆ 600 ರಿಂದ 800 ರೂಪಾಯಿವರೆಗೆ ದಾಖಲೆ ಬೆಲೆ ಸಿಗುತ್ತಿದ್ದು, ಇದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ದೇಶೀಯ ಮಾರುಕಟ್ಟೆಯ ಜೊತೆಗೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ಧಾರವಾಡದ ಮಾವು ರಫ್ತಾಗುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿ ಪರಿಣಮಿಸಿದೆ. ಇನ್ನೂ ಹಲವು ದೇಶಗಳಿಂದ ಬೇಡಿಕೆ ಬರುತ್ತಿದ್ದು, ಅಗತ್ಯ ದಾಖಲೆ ಮತ್ತು ಪ್ರಕ್ರಿಯೆಗಳೊಂದಿಗೆ ಮತ್ತಷ್ಟು ರಫ್ತು ಮಾಡಲು ಸಿದ್ಧತೆಗಳು ನಡೆಯುತ್ತಿವೆ.

ಒಟ್ಟಿನಲ್ಲಿ, ಹವಾಮಾನ ಸವಾಲಿನ ನಡುವೆಯೂ ಧಾರವಾಡದ ಅಪೂಸ್ ಮಾವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಗಟ್ಟಿತನ ಪ್ರದರ್ಶಿಸುತ್ತಿದ್ದು, ಕರ್ನಾಟಕದ ಕೃಷಿ ಕ್ಷೇತ್ರಕ್ಕೆ ಹೊಸ ಭರವಸೆ ಮೂಡಿಸಿದೆ.