ಉಡುಪಿ: ಪ್ರವಾಸಿಗರನ್ನು ಕರೆದೊಯ್ಯುವ ಕೊನೆಯ ಬೋಟು ತಪ್ಪಿದ ಪರಿಣಾಮ ನಾಲ್ವರು ಪ್ರವಾಸಿಗರು ಮಲ್ಪೆ ಸಮುದ್ರ ಮಧ್ಯೆ ಇರುವ ಸೈಂಟ್ ಮೇರಿಸ್ ದ್ವೀಪದಲ್ಲಿ ಇಡೀ ರಾತ್ರಿ ಕಳೆದ ಆತಂಕಕಾರಿ ಘಟನೆ ನ.23ರಂದು ನಡೆದಿದೆ.
ಕೇರಳದ ಕೊಚ್ಚಿನ್ ನಿವಾಸಿಗಳಾದ ಜಸ್ಟಿನ್(34), ಶೀಜಾ(33), ಜೋಶ್(28) ಹಾಗೂ ಹರೀಶ್(17) ಅವರು ದ್ವೀಪಕ್ಕೆ ತೆರಳಿ ಅಲ್ಲೇ ಉಳಿದವರು. ನ.24ರಂದು ಬೆಳಗ್ಗೆ 7:30ರ ಸುಮಾರಿಗೆ ಸೈಂಟ್ ಮೇರಿಸ್ ದ್ವೀಪದಿಂದ ರಕ್ಷಿಸಿ ತೀರಕ್ಕೆ ಕರೆತರಲಾಗಿದೆ. ಇವರನ್ನು ವಿಚಾರಣೆ ನಡೆಸಿದ ಮಲ್ಪೆ ಪೊಲೀಸರು ಇವರನ್ನು ಸುರಕ್ಷಿತವಾಗಿ ಕೇರಳ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಜಸ್ಟಿನ್ ಮತ್ತು ಶೀಜಾ ಕೊಚ್ಚಿನ್ನಲ್ಲಿ ಸಣ್ಣ ಹೊಟೇಲ್ ನಡೆಸಿಕೊಂಡು ಬರುತ್ತಿದ್ದು, ಜೋಶ್ ಇವರಲ್ಲಿ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ.
ನ.21ರಂದು ಕೇರಳದಿಂದ ರೈಲಿನಲ್ಲಿ ಹೊರಟು ಉಡುಪಿ ತಲುಪಿದ್ದರು. ಇಲ್ಲಿ ಕೆಲವೊಂದು ಸ್ಥಳಕ್ಕೆ ಭೇಟಿ ನೀಡಿ ನಂತರ ಗೋವಾ ರಾಜ್ಯಕ್ಕೆ ತೆರಳಿದ್ದರು. ಅಲ್ಲಿಂದ ನ.23ರ ಮಧ್ಯಾಹ್ನ ಉಡುಪಿಗೆ ಆಗಮಿಸಿದ ಇವರು, ಮಧ್ಯಾಹ್ನ 12.30ರ ಸುಮಾರಿಗೆ ಮಲ್ಪೆ ಅಭಿವೃದ್ಧಿ ಸಮಿತಿಯ ಬೋಟಿನ ಮೂಲಕ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರೆನ್ನಲಾಗಿದೆ.
ಅನಂತರ ಸೈಂಟ್ ಮೇರಿಸ್ ದ್ವೀಪದ ಹತ್ತಿರದ ಇನ್ನೊಂದು ಸಣ್ಣ ದ್ವೀಪಕ್ಕೆ ತೆರಳಿದ್ದರು. ಸಂಜೆಯ ವೇಳೆ ನೀರಿನ ಮಟ್ಟ ಏರಿಕೆಯಾದ ಪರಿಣಾಮ ದ್ವೀಪವನ್ನು ದಾಟಲು ಸಾಧ್ಯವಾಗದೆ ಇವರೆಲ್ಲ ಅಲ್ಲೇ ಉಳಿದುಕೊಂಡಿದ್ದರು. ಈ ಮಧ್ಯೆ ಪ್ರವಾಸಿಗರನ್ನು ವಾಪಸ್ ಕರೆದೊಯ್ಯುವ ಕೊನೆಯ ಬೋಟ್ ಸಂಜೆ 6:45ರ ಸುಮಾರಿಗೆ ದ್ವೀಪಕ್ಕೆ ಬಂದಿದ್ದು, ದ್ವೀಪದಲ್ಲಿ ಇದ್ದ ಎಲ್ಲ ಪ್ರವಾಸಿಗರನ್ನು ಕರೆದುಕೊಂಡು ತೀರಕ್ಕೆ ಬಂದಿತ್ತು. ಆದರೆ ಕೇರಳದ ಈ ನಾಲ್ವರು ಬೋಟಿನವರಿಗೆ ಕಾಣದೇ ವಾಪಸ್ ತೀರಕ್ಕೆ ಬಂದಿತು. ನೀರಿನ ಮಟ್ಟ ಇಳಿದ ನಂತರ ಇವರು ಬೋಟು ಆಗಮಿಸುವ ಸ್ಥಳಕ್ಕೆ ಬಂದು ನೋಡಿದಾಗ ಬೋಟು ತೆರಳಿರುವುದು ತಿಳಿಯಿತು.
ಇಂದು ಬೆಳಗ್ಗೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ ಬೋಟಿನವರು ಇವರನ್ನು ಗಮನಿಸಿ ತೀರಕ್ಕೆ ಕರೆದುಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದರು.