ಮಂಗಳೂರು: ಫಲ್ಗುಣಿ ನದಿಗೆ (ಗುರುಪುರ ನದಿ) ಅಡ್ಡಲಾಗಿ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿಯನ್ನು ಸಂಪರ್ಕಿಸುವ ಅತ್ಯಾಧುನಿಕ ತಂತ್ರಜ್ಞಾನದ ಬೋ ಸ್ಟ್ರಿಂಗ್ ಸೇತುವೆಯ ಕಾಮಗಾರಿ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಯೋಜನೆಯು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಸ್ಥಳೀಯ ನಿವಾಸಿಗಳಿಗೆ ನಗರದ ಸಂಪರ್ಕವನ್ನು ಇದು ಸುಲಭಗೊಳಿಸಲಿದೆ” ಎಂದರು.
“ಸ್ಮಾರ್ಟ್ ಸಿಟಿ ಯೋಜನೆಯಡಿ 64 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ. ಇದರಿಂದ ಬೆಂಗ್ರೆ ಪ್ರದೇಶದ ಸುಮಾರು 4,000 ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತ ಬೆಂಗ್ರೆ ನಿವಾಸಿಗಳು ನಗರ ತಲುಪಲು ಫೆರ್ರಿ ಅವಲಂಬಿಸಿದ್ದಾರೆ ಅಥವಾ ಕುಳೂರು ಮೂಲಕ ಸುಮಾರು 30-35 ನಿಮಿಷಗಳ ಕಾಲ ಪ್ರಯಾಣಿಸಬೇಕಿದೆ. ಸೇತುವೆ ಪೂರ್ಣಗೊಂಡರೆ ಈ ಪ್ರಯಾಣದ ಅವಧಿ ಕೇವಲ 8 ರಿಂದ 10 ನಿಮಿಷಕ್ಕೆ ಇಳಿಕೆಯಾಗಲಿದೆ” ಎಂದರು.
“ರಾಷ್ಟ್ರೀಯ ಜಲಮಾರ್ಗ ಮಾರ್ಗಸೂಚಿಗಳ ಅನ್ವಯ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದ್ದು, ದೋಣಿಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಜೂನ್ ತಿಂಗಳಿನಲ್ಲಿ ಬೋ ಸ್ಟ್ರಿಂಗ್ ಮೇಲೆತ್ತುವ ಪ್ರಕ್ರಿಯೆ ನಡೆಯಲಿದೆ. ಈ ಸೇತುವೆಯು ಮಂಗಳೂರಿನ ಹೆಮ್ಮೆಯ ‘ಬ್ಲ್ಯೂಫ್ಲ್ಯಾಗ್’ ಬೀಚ್‌ಗೆ ಎರಡನೇ ಸಂಪರ್ಕ ರಸ್ತೆಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಸಿಗಲಿದೆ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
“ಜಿಲ್ಲೆಯಲ್ಲಿ ಮಳೆಗಾಲದ ಸಿದ್ಧತೆ ಮತ್ತು ಕುಡಿಯುವ ನೀರಿನ ಪೂರೈಕೆ ಕುರಿತು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರವಾಹ ಮತ್ತು ಭೂಕುಸಿತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ತಡೆಗೋಡೆ ನಿರ್ಮಾಣಕ್ಕೆ 80 ಕೋಟಿ ರೂ. ಅನುದಾನ ಲಭ್ಯವಿದ್ದು, ಕಾಮಗಾರಿ ಆರಂಭಿಸಲಾಗಿದೆ. ನಗರದ ರಾಜಕಾಲುವೆ ಹೂಳೆತ್ತಲು 9 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಪರಿಶೀಲನೆಯ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಕಾರ್ಪೊರೇಟರ್‌ಗಳಾದ ವಿನಯರಾಜ್, ಅನಿಲ್ ಕುಮಾರ್, ಸಂತೋಷ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಸ್ಮಾರ್ಟ್ ಸಿಟಿ ಎಂಡಿ ಡಾ. ಸಂತೋಷ್ ಕುಮಾರ್ ಹಾಗೂ ಜಿ.ಎಂ ಅರುಣ್ ಪ್ರಭಾ ಉಪಸ್ಥಿತರಿದ್ದರು.
ಸೇತುವೆಯ ವೈಶಿಷ್ಟ್ಯಗಳು:
ಇದು ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ‘ಬೋ ಸ್ಟ್ರಿಂಗ್’ ಮಾದರಿಯ ವಾಹನ ಸಂಚಾರದ ಸೇತುವೆಯಾಗಿದೆ. ಈ ಸೇತುವೆಯು ಒಟ್ಟು 285 ಮೀಟರ್ ಉದ್ದವಿದ್ದು, 100 ಮೀಟರ್ ನಾವಿಗೇಶನ್ ಸ್ಪಾನ್ ಹಾಗೂ 10 ಮೀಟರ್ ವರ್ಟಿಕಲ್ ಕ್ಲಿಯರೆನ್ಸ್ ಒದಗಿಸಲು ಬೋಸ್ಟ್ರಿಂಗ್ ಗರ್ಡರ್ ಅಳವಡಿಸಲಾಗಿದೆ.
ರಾಷ್ಟ್ರೀಯ ಜಲಮಾರ್ಗ 43ರ ನಿಯಮಾವಳಿಗಳ ಪ್ರಕಾರ, ಸೇತುವೆ ಹೈ ಟೈಡ್ ಲೈನ್‌ನಿಂದ 10 ಮೀಟರ್ ಎತ್ತರದಲ್ಲಿರಲಿದೆ. ಪ್ರಸ್ತುತ ದೋಣಿ ಸೇವೆ ಲಭ್ಯವಿಲ್ಲದ ಸಮಯದಲ್ಲಿ ಬೆಂಗ್ರೆ ನಿವಾಸಿಗಳು ಕೂಳೂರು ಮೂಲಕ ನಗರವನ್ನು ತಲುಪಲು ಸುಮಾರು 30 ರಿಂದ 35 ನಿಮಿಷಗಳ ಕಾಲ ಪ್ರಯಾಣಿಸಬೇಕಿದೆ. ಈ ಸೇತುವೆ ಪೂರ್ಣಗೊಂಡ ನಂತರ ಬೆಂಗ್ರೆ, ತಣ್ಣೀರುಬಾವಿ ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯ ಕೇವಲ 8 ರಿಂದ 10 ನಿಮಿಷಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ.

















