ಉಡುಪಿ: ಶ್ರೀಕ್ಷೇತ್ರ ಪುರಿ ಗೋವರ್ಧನ ಪೀಠದ ಜಗದ್ಗುರು ನಿಶ್ಚಲಾನಂದ ಸರಸ್ವತೀ ಮಹಾಸ್ವಾಮಿಗಳ ಸನಾತನ ಧರ್ಮ ಸಭಾ ಸಂದೇಶ ಕಾರ್ಯಕ್ರಮವನ್ನು ನ.27ರಿಂದ 29ರ ವರೆಗೆ ಉಡುಪಿಯಲ್ಲಿ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ. 27ರಂದು ನಿಶ್ಚಲಾನಂದ ಸರಸ್ವತೀ ಮಹಾಸ್ವಾಮಿ ಉಡುಪಿಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ 7ಗಂಟೆಗೆ ಇಂದ್ರಾಳಿಯ ರೈಲ್ವೆ
ನಿಲ್ದಾಣದಲ್ಲಿ ಸ್ವಾಗತಿಸಲಾಗುವುದು. ಬಳಿಕ ಅವರು ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವ ಮಂಚಿಕೋಡಿಯ ಗುರ್ಮೇಬೆಟ್ಟುವಿನ ಸುವರ್ಧನ್ ನಾಯಕ್ರ ಮನೆಗೆ ಕರೆದುಕೊಂಡು ಬರಲಾಗುತ್ತದೆ ಎಂದರು. ಸಂಜೆ 4 ಗಂಟೆಗೆ ಮುಖ್ಯ ರಸ್ತೆಯಿಂದ ಶ್ರೀಗಳನ್ನು ಪೂರ್ಣಕುಂಭ ಕಲಶದೊಂದಿಗೆ ಸ್ವಾಗತಿಸಿ, ಸಾರ್ವಜನಿಕ ಸಭೆ ನಡೆಯುವ ಉಡುಪಿಯ ಶಾರದಾ ಕಲ್ಯಾಣ ಮಂಟಪಕ್ಕೆ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಂಜೆ 5ಗಂಟೆಗೆ ಗುರುಗಳಿಂದ ಸನಾತನ ಧರ್ಮ ಸಭಾ ಸಂದೇಶ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ನ. 28ರಂದು ಬೆಳಿಗ್ಗೆ 11ಗಂಟೆಗೆ ಶ್ರೀಗಳು ವಾಸ್ತವ್ಯ ಹೂಡಲಿರುವ ಮಂಚಿಕೋಡಿಯ ಮನೆಯಲ್ಲಿ ಹಿಂದೂ ಸಮಾಜದ ಸಂಘ ಸಂಸ್ಥೆಯ ಪ್ರಮುಖರೊಂದಿಗೆ ಸಂವಾದ ನಡೆಸುವರು. ಅಂದು ಸಂಜೆ 4ಗಂಟೆಗೆ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಶ್ರೀಗಳ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ನ. 29ರಂದು ಬೆಳಿಗ್ಗೆ 11ಗಂಟೆಗೆ ಶ್ರೀಗಳು ವಾಸ್ತವ್ಯ ಹೂಡಲಿರುವ ಮಂಚಿಕೋಡಿಯ ಮನೆಯಲ್ಲಿ ಮಾತೃಸಂಗಮ ಕಾರ್ಯಕ್ರಮ ಜರುಗಲಿದೆ. ಬಳಿಕ ಸಂಜೆ 6 ಗಂಟೆಗೆ ಇಂದ್ರಾಳಿ ರೈಲ್ವೆ ನಿಲ್ದಾಣದ ಮೂಲಕ ಬೆಂಗಳೂರಿಗೆ ಶ್ರೀಗಳು ಪ್ರಯಾಣ ಬೆಳೆಸುವರು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಪ್ರಫುಲ್ಲ ಕುಮಾರ್ ರಾವ್, ಕೋಶಾಧಿಕಾರಿ ಮಂಜುನಾಥ ಹೆಬ್ಬಾರ್, ಕಾರ್ಯದರ್ಶಿಗಳಾದ ಬಾಲಕೃಷ್ಣ ಮದ್ದೋಡಿ, ಮಂಜುನಾಥ್ ಮಣಿಪಾಲ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ಇದ್ದರು.