ವ್ಯಂಗ್ಯಚಿತ್ರಕಾರರು ಯಾವಾಗಲೂ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ:ಬಾದಲ್ ನಂಜುಂಡಸ್ವಾಮಿ

ಕುಂದಾಪುರ: ವ್ಯಂಗ್ಯಚಿತ್ರಕಾರರು ಯಾವಾಗಲೂ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ. ವ್ಯಂಗ್ಯಚಿತ್ರಕಾರರಿಗೆ ನಾಯಕರು ಇಲ್ಲ. ಆದರೆ ಸ್ಪರ್ಧಿಗಳು ಇದ್ದಾರೆ. ದೇಶದ ರಾಜಕಾರಣಿಗಳಿಗಿಂತ ರಾಜಕಾರಣದ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ವ್ಯಂಗ್ಯಚಿತ್ರಕಾರರು ಯಾಕೆ ರಾಜಕಾರಣಿಗಳಾಗಬಾರದು ಎಂದು ಹಲವು ಸಲ ಜಿಜ್ಞಾಸೆ ಮೂಡಿದೆ ಎಂದು ಬೆಂಗಳೂರಿನ ಪ್ರಸಿದ್ಧ ಸ್ಟ್ರೀಟ್ ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷೀನರಸಿಂಹ ಕಲಾಮಂದಿರದಲ್ಲಿ ಕಾರ್ಟೂನ್ ಬಳಗ ಕುಂದಾಪುರದ ಆಶ್ರಯದಲ್ಲಿ ನಡೆಯುತ್ತಿರುವ ‘ಕಾರ್ಟೂನ್ ಹಬ್ಬ’ ದ ಅಂಗವಾಗಿ ಭಾನುವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ‘ಮಾಸ್ಟರ್‌ಸ್ಟ್ರೋಕ್ಸ್’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವ್ಯಂಗ್ಯಚಿತ್ರಕಾರರು ಶಬ್ದಗಳನ್ನು ಬಳಸಿ ಮಾತನಾಡೋದಕ್ಕಿಂತ, ಕಲಾವಿದರ ಭಾಷೆಯಾಗಿರುವ ಚಿತ್ರಗಳನ್ನು ಬಳಸಿ ಮಾತನಾಡೋಕೆ ಇಷ್ಟ ಪಡುತ್ತಾರೆ. ಬೇರೆ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಪ್ರಕಟವಾಗುವ ಕಾರ್ಟೂನ್‌ಗಳಿಂದ ದೇಶದ ಪ್ರವರ್ಧನಮಾನದ ರಾಜಕೀಯ ಸ್ಥಿತಿ-ಗತಿಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬಹುದು ಎಂದು ಬಾದಲ್ ನಂಜುಂಡಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅವರು, ಮಹಾತ್ಮ ಗಾಂಧೀಜಿ ನಮ್ಮಿಂದ ದೂರವಾಗುತ್ತಿದ್ದಾರೋ ಅಥವಾ ಇಂದಿನ ಸಾಮಾಜಿಕ ಜಾಲಾತಾಣಗಳನ್ನು ಬಳಸಿಕೊಂಡು ಅವರನ್ನು ದೂರ ಮಾಡಲಾಗುತ್ತಿದೆಯಾ ಎಂದು ಚಿಂತಿಸಬೇಕಾದ ಈ ಕಾಲಘಟ್ಟದಲ್ಲಿ ಗಾಂಧಿ-೧೫೦ ಎನ್ನುವ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಸಂಘಟಿಸಿರುವ ಕುಂದಾಪುರ ಕಾರ್ಟೂನ್ ಬಳಗ ಅಭಿನಂದನಾರ್ಹರು. ನಮ್ಮೊಳಗೆ ಇರುವ ಗಾಂಧಿಯನ್ನು ಎಚ್ಚರಿಸುವ ಕೆಲಸ ಆಗಬೇಕು. ಸಂವಿಂಧಾನದ ಆಶಯವನ್ನು ಕಾಪಾಡುವ ಕಾರ್ಯಗಳು ನಿರಂತರವಾಗಿರಬೇಕು ಎಂದ ಅವರು ವ್ಯಂಗ್ಯಚಿತ್ರಕಾರ ಸತೀಶ್‌ಆಚಾರ್ಯ ಪ್ರಾರಂಭಿಸಿದ ‘ನಾನು ಗಾಂಧಿ’ ಅಭಿಯಾನಕ್ಕೆ ದೇಶಾದ್ಯಾಂತ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು.

ಹಿರಿಯ ವ್ಯಂಗ್ಯಚಿತ್ರಕಾರರಾದ ಚಂದ್ರನಾಥ ಆಚಾರ್ಯ, ವಿ.ಜಿ.ನರೇಂದ್ರ ಹಾಗೂ ಸತೀಶ್ ಆಚಾರ್ಯ ಇದ್ದರು. ಚಿತ್ರಕಾರರಾದ ಬಾದಲ್ ನಂಜುಂಡಸ್ವಾಮಿ, ದತ್ತಾತ್ರಿ ಎಂ.ಎನ್ ಹಾಗೂ ನಂಜುಂಡಸ್ವಾಮಿಯವರನ್ನು ಸನ್ಮಾನಿಸಲಾಯಿತು.

ಕಾರ್ಟೂನ್‌ಬಳಗದ ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ಚಂದ್ರ ಗಂಗೊಳ್ಳಿ, ರವಿಕುಮಾರ ಗಂಗೊಳ್ಳಿ, ಸಂತೋಷ ಸಸಿಹಿತ್ಲು, ತುಷಾರ್ ಸಸಿಹಿತ್ಲು ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಉದಯ ಗಾಂವ್ಕಾರ್ ಸ್ವಾಗತಿಸಿ ನಿರೂಪಿಸಿದರು.