ಮಂಗಳೂರು: ಕಟೀಲು ಮೇಳದಿಂದ ಖ್ಯಾತ ಭಾಗವತ ಸತೀಶ್ ಶೆಟ್ಟಿ ಅವರನ್ನು ಏಕಾಏಕಿ ಮೇಳದಿಂದ ಕೈ ಬಿಟ್ಟು, ರಂಗಸ್ಥಳದಲ್ಲೇ ಅವಮಾನ ಮಾಡಿದ ವಿಚಾರಕ್ಕೆ ಸತೀಶ್ ಶೆಟ್ಟಿ ಪ್ರತಿಕ್ರಿಯೆ ನೀಡಿ ಇದು ಕಲಾವಿದನ ಸಾವು ಅಂತ ನೋವಿನಿಂದ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೌನವಾಗಿದ್ದ ಅವರು ಅನಂತರ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿ, ಜೀವನದುದ್ದಕ್ಕೂ ಕಟೀಲು ತಾಯಿಯ ಸೇವೆ ಮಾಡಬೇಕೆಂದು ಇಚ್ಚೆ ಹೊಂದಿದವನು. ಯಾವುದೇ ವಿಚಾರದಲ್ಲಿ ಬೇಡಿಕೆ ಇಟ್ಟವನಲ್ಲ. ಆದರೆ ನನಗೆ ಆದ ಅವಮಾನದಂತೆ ಇತರ ಯಾವ ರಂಗದ ಕಲಾವಿದನಿಗೂ ಆಗಬಾರದು. ಇದು ಕಲಾವಿದನ ಸಾವು. ಯಾವುದೇ ಸರಿ ತಪ್ಪುಗಳು ನಡೆದಿದ್ದರೂ, ಅದಕ್ಕೆ ಜಾಗವಿತ್ತು, ಸಮಯವಿತ್ತು. ಸಾರ್ವಜನಿಕ ಅಭಿಮಾನಿಗಳ ಮುಂದೆ, ರಂಗಸ್ಥಳದಲ್ಲಿ ಕುಳಿತ ನಂತರ ಎಬ್ಬಿಸಿ ಕಳುಹಿಸಬಾರದು ಎಂದು ಹೇಳಿದ್ದಾರೆ.