ಬೆಂಗಳೂರು: ಇಂದು (ಶನಿವಾರ) ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಚಾನಕ್ ಜೋರಾಗಿ ಬೀಪ್ ಶಬ್ದ ಕೇಳಿಸಿಕೊಂಡರೂ ಅಥವಾ ತುರ್ತು ಎಚ್ಚರಿಕೆಯ ಸಂದೇಶ ಬಂದರೂ ಆತಂಕಪಡಬೇಕಿಲ್ಲ. ಕೇಂದ್ರ ಸರ್ಕಾರ ಹೊಸ ವಿಪತ್ತು ಎಚ್ಚರಿಕಾ ವ್ಯವಸ್ಥೆಯನ್ನು ಪರೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್‌ಗಳಿಗೆ ವಿಶೇಷ ಅಲರ್ಟ್ ಸಂದೇಶಗಳು ರವಾನೆಯಾಗಲಿವೆ.
National Disaster Management Authority (NDMA) ಮೇ 2ರಂದು ದೇಶವ್ಯಾಪಿ ಹೊಸ ತುರ್ತು ಎಚ್ಚರಿಕಾ ವ್ಯವಸ್ಥೆಯ ಪರೀಕ್ಷೆ ನಡೆಸುತ್ತಿದೆ. ಇದರ ಭಾಗವಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳ ನಾಗರಿಕರ ಮೊಬೈಲ್‌ಗಳಿಗೆ ಜೋರಾದ ಸೈರನ್ ಧ್ವನಿಯೊಂದಿಗೆ ಫ್ಲ್ಯಾಶ್ ಸಂದೇಶ ತಲುಪುವ ಸಾಧ್ಯತೆ ಇದೆ.
‘ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್’ ಎಂಬ ಈ ವ್ಯವಸ್ಥೆಯ ಮೂಲಕ ಪ್ರಕೃತಿ ವಿಕೋಪ, ಪ್ರವಾಹ, ಭೂಕಂಪ, ಚಂಡಮಾರುತ ಅಥವಾ ಇತರ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೇರವಾಗಿ ಮೊಬೈಲ್‌ಗಳಿಗೆ ಮಾಹಿತಿ ರವಾನಿಸುವ ಉದ್ದೇಶ ಹೊಂದಲಾಗಿದೆ.
ಈ ವ್ಯವಸ್ಥೆಯ ಮೂಲಕ ತುರ್ತು ಸಂದರ್ಭಗಳಲ್ಲಿ ಸರ್ಕಾರವು ಕ್ಷಣಾರ್ಧದಲ್ಲಿ ಜನರಿಗೆ ಎಚ್ಚರಿಕೆ ನೀಡಲು ಸಾಧ್ಯವಾಗಲಿದೆ. ಎಸ್‌ಎಂಎಸ್ ಅಥವಾ ಇಂಟರ್‌ನೆಟ್ ಅವಲಂಬನೆ ಇಲ್ಲದೆ ನಿರ್ದಿಷ್ಟ ಪ್ರದೇಶದಲ್ಲಿರುವ ಮೊಬೈಲ್‌ಗಳಿಗೆ ನೇರ ಸಂದೇಶ ತಲುಪಿಸುವ ತಂತ್ರಜ್ಞಾನ ಇದಾಗಿದೆ.
ಈ ಹಿಂದೆಯೂ ಸರ್ಕಾರ ಹಲವು ಬಾರಿ ಈ ವ್ಯವಸ್ಥೆಯನ್ನು ಪರೀಕ್ಷಿಸಿದ್ದು, ರಾಷ್ಟ್ರವ್ಯಾಪಿ ಜಾರಿಗೆ ಮುನ್ನ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆ ಪರಿಶೀಲಿಸಲು ಮತ್ತೊಮ್ಮೆ ಪರೀಕ್ಷೆ ನಡೆಸುತ್ತಿದೆ.
ಹೀಗಾಗಿ ಇಂದು ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ ಬಂದರೆ ಯಾರೂ ಗಾಬರಿಯಾಗದೇ, ಇದು ಕೇವಲ ಪರೀಕ್ಷಾ ಸಂದೇಶ ಎಂದು ತಿಳಿದು ಶಾಂತವಾಗಿರಬೇಕು.

















