ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಸಹಬಾಳ್ವೆ ಉಡುಪಿ, ಸಿಐಟಿಯು, ಭಾರತೀಯ ಕ್ರೈಸ್ತ ಒಕ್ಕೂಟ ಹಾಗೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಹಿತ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಪ್ರಯುಕ್ತ “ದೇಶಾಭಿಮಾನಿ ಸಮಾವೇಶ” ವನ್ನು ಇದೇ ಎ.26ರಂದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಚಲನಚಿತ್ರ ನಟ, ನಿರ್ದೇಶಕ ದುನಿಯಾ ವಿಜಯ್ ಸಂಜೆ 5ಗಂಟೆಗೆ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಸಹಬಾಳ್ವೆ ಉಡುಪಿ ಸಂಚಾಲಕ ಪ್ರೊ. ಕೆ. ಫಣಿರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರಗತಿಪರ ಹೋರಾಟಗಾರ ಕೆ.ಎಲ್. ಅಶೋಕ್ ವಿಶೇಷಾಂಕ ಬಿಡುಗಡೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಸೇವಕ ಡಾ. ಎಚ್.ಎಸ್. ಶೆಟ್ಟಿ ಅವರಿಗೆ ಭೀಮ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾವೇಶದಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮಾವೇಶಕ್ಕೂ ಮುನ್ನ ಮಧ್ಯಾಹ್ನ 3.30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ನಿಂದ “ಜೈ ಭೀಮ್ ಸಾಂಸ್ಕೃತಿಕ ಜಾಥಾ”ವನ್ನು ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ಎಸ್ಪಿ ಹರಿರಾಮ್ ಶಂಕರ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಜಾಥವು ಕೆಎಂ ಮಾರ್ಗ, ಹಳೆ ಡಯಾನ್ ಸರ್ಕಲ್, ಲಯನ್ಸ್ ಸರ್ಕಲ್ ಮೂಲಕ ಸಾಗಿಬಂದು ಸಮಾವೇಶ ನಡೆಯುವ ಬಳಿಕ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನಕ್ಕೆ ಬಂದು ತಲುಪಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮುಖಂಡರಾದ ಶಾಮರಾಜ್ ಬಿರ್ತಿ, ಕೆ. ಫಣಿರಾಜ್, ಮೆಲ್ವನ್ ಅರನ್ಹಾ, ನಾಗೇಶ್ ಕುಮಾರ್ ಉದ್ಯಾವರ, ಕವಿರಾಜ್ ಎಸ್., ಇರ್ಷಾದ್ ನೇಜಾರು, ಇಸ್ಮಾಯಿಲ್ ಹುಸೇನ್ ಕಟ್ಟಾಡಿ, ಚಾರ್ಲ್ಸ್ ಆ್ಯಂಬ್ಲರ್, ಅಫ್ವಾನ್ ಮೊದಲಾದವರು ಉಪಸ್ಥಿತರಿದ್ದರು.

















