ಏ. 24 ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗೋದು ಡೌಟ್! ಕಾರಣವೇನು?

ಬೆಂಗಳೂರು: ಹೈಕೋರ್ಟ್ ನಲ್ಲಿ ತೃತೀಯ ಭಾಷಾ ವಿಷಯಗಳಿಗೆ ಗ್ರೇಡಿಂಗ್ ಬದಲು ಅಂಕಗಳನ್ನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

ಪರೀಕ್ಷೆಗೆ ಮುನ್ನವೇ ಏಪ್ರಿಲ್ 24ರಂದು ಫಲಿತಾಂಶ ಪ್ರಕಟಿಸುವ ಸಂಭಾವ್ಯ ದಿನಾಂಕ ನಿಗದಿಯಾಗಿದ್ದರೂ, ಇದೀಗ ಅದು ಮುಂದೂಡಲ್ಪಡುವ ಸಾಧ್ಯತೆ ಇದೆ. ಈ ಕುರಿತ ಮರುಪರಿಶೀಲನಾ ಅರ್ಜಿ ಏಪ್ರಿಲ್ 21ರಂದು ವಿಚಾರಣೆಗೆ ನಿಗದಿಯಾಗಿದ್ದು, ನ್ಯಾಯಾಲಯದ ತೀರ್ಪಿನ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭಾರೀ ಕುತೂಹಲ ಮೂಡಿದೆ.

ಈ ನಡುವೆ, ಅರ್ಜಿ ಇತ್ಯರ್ಥವಾಗುವವರೆಗೆ ತೃತೀಯ ಭಾಷೆಗೆ ಗ್ರೇಡಿಂಗ್ ನೀಡಬೇಕಾ ಅಥವಾ ಅಂಕಗಳನ್ನು ಪರಿಗಣಿಸಿ ಫಲಿತಾಂಶ ಸಿದ್ಧಪಡಿಸಬೇಕಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೌಲ್ಯಮಾಪನ ಪೂರ್ಣಗೊಂಡಿದ್ದರೂ Karnataka School Examination and Assessment Board ಫಲಿತಾಂಶ ಪ್ರಕಟಣೆಗೆ ಸಂಪೂರ್ಣ ಸಿದ್ಧತೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನು, ವಿಚಾರಣೆ ದಿನವೇ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆ ಇದ್ದರೂ, ಅಗತ್ಯವಿದ್ದರೆ ನ್ಯಾಯಾಲಯ ಹೆಚ್ಚುವರಿ ಸಮಯವೂ ತೆಗೆದುಕೊಳ್ಳಬಹುದು. ಯಾವುದೇ ತೀರ್ಪು ಬಂದರೂ ಅದಕ್ಕೆ ಅನುಗುಣವಾಗಿ ಫಲಿತಾಂಶ ನೀಡಲು ಮಂಡಳಿ ಗ್ರೇಡಿಂಗ್ ಆಧಾರಿತ ಮತ್ತು ಅಂಕ ಆಧಾರಿತ ಎರಡು ರೀತಿಯ ಫಲಿತಾಂಶಗಳನ್ನು ಸಿದ್ಧಪಡಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

ಆದರೆ, ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಇದು ಸುಲಭದ ಕೆಲಸವಲ್ಲ ಎಂದು ತಿಳಿದುಬಂದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ, ಏಪ್ರಿಲ್ 24ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳ ಮೂಲಗಳು ಸೂಚಿಸಿವೆ.