ಹುಬ್ಬಳ್ಳಿ: ಇತ್ತೀಚೆಗೆ ದೇಶದಲ್ಲಿ ವಿಮಾನ ದುರಂತಗಳ ಆತಂಕ ಹೆಚ್ಚುತ್ತಿರುವ ನಡುವೆಯೇ, ರಾಜ್ಯದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಕೊನೆಯ ಕ್ಷಣದಲ್ಲಿ ತಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly91 ಏರ್ ಲೈನ್ಸ್‌ನ IC3401 (ATRTurboprop AT7) ವಿಮಾನವು ಮಧ್ಯ ಗಗನದಲ್ಲೇ ತಾಂತ್ರಿಕ ದೋಷಕ್ಕೆ ಒಳಗಾಗಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ ವಿಮಾನವು ಗಗನದಲ್ಲೇ ಸುಮಾರು 4 ಗಂಟೆಗಳ ಕಾಲ ಸುತ್ತಾಡಿ, ಪ್ರಯಾಣಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು.
ಮಧ್ಯಾಹ್ನ 4 ಗಂಟೆಗೆ ಹೈದರಾಬಾದ್‌ನಿಂದ ಟೇಕ್‌ಆಫ್ ಆಗಿದ್ದ ವಿಮಾನವು ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ವಿಮಾನ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದೆ.
ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಹರಸಾಹಸ ಪಟ್ಟು, ಮುಂಡಗೋಡ, ದಾವಣಗೆರೆ, ಶಿವಮೊಗ್ಗ ಪ್ರದೇಶಗಳ ಮೇಲೆ ಸುತ್ತಾಡಿದರು. ಆದರೆ ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆ ಯಾವುದೇ ಸ್ಥಳದಲ್ಲೂ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ.
ಕೊನೆಗೆ ವಿಮಾನವನ್ನು ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7.30ರ ಸುಮಾರಿಗೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.
ಈ ಅವಧಿಯಲ್ಲಿ ಆತಂಕಗೊಂಡ ಪ್ರಯಾಣಿಕರು ಕಣ್ಣೀರಿಡುತ್ತಾ ದೇವರನ್ನು ಪ್ರಾರ್ಥಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೊಂದೆಡೆ, ವಿಮಾನದ ಸಿಬ್ಬಂದಿಗಳು ಪ್ರಯಾಣಿಕರಿಗೆ ಧೈರ್ಯ ತುಂಬುತ್ತಾ “ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ, ದಯವಿಟ್ಟು ಆತಂಕಪಡಬೇಡಿ” ಎಂದು ಮನವರಿಕೆ ಮಾಡುತ್ತಿರುವುದು ಗಮನಸೆಳೆದಿದೆ.
ಘಟನೆಯು ದೊಡ್ಡ ದುರಂತವಾಗುವ ಸಾಧ್ಯತೆಯಿದ್ದರೂ, ಪೈಲಟ್‌ನ ಸಮರ್ಥ ಕ್ರಮದಿಂದ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿರುವುದು ಶ್ಲಾಘನೀಯವಾಗಿದೆ.

















