ಬೆಳಗಾವಿ: ಮೊಬೈಲ್ ಕಳೆದುಹೋದರೆ ಅದು ಮರಳಿ ಸಿಗುವುದೇ ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಬೆಳಗಾವಿ ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಈ ಕಲ್ಪನೆಯನ್ನು ತಪ್ಪು ಎಂದು ಸಾಬೀತುಪಡಿಸಿದ್ದಾರೆ. ಸೈ ಅನ್ನಿಸಿಕೊಂಡಿದ್ದಾರೆ.
ಹೌದು. ಬೆಳಗಾವಿ ಉತ್ತರ ವಲಯದ IGP ಚೇತನ್ ಸಿಂಗ್ ರಾಥೋರ್ ಅವರ ಮಾರ್ಗದರ್ಶನದಲ್ಲಿ ಅಥಣಿ ಉಪವಿಭಾಗದಲ್ಲಿ ಕಳೆದುಹೋಗಿದ್ದ 100 ಮೊಬೈಲ್ಗಳನ್ನು ಪತ್ತೆಹಚ್ಚಿ ಸಂಬಂಧಿತ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಈ ಮೊಬೈಲ್ಗಳು ಮತ್ತೆ ತಮ್ಮ ನಿಜವಾದ ಹಕ್ಕುದಾರರ ಕೈ ಸೇರಿವೆ.
ಪೊಲೀಸರ ನಿರಂತರ ಕಾರ್ಯಾಚರಣೆಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಸಹ 110 ಮೊಬೈಲ್ಗಳನ್ನು ಮರಳಿ ನೀಡಲಾಗಿತ್ತು. ಇದೀಗ ಅಥಣಿ, ರಾಯಭಾಗ ಮತ್ತು ಕಾಗವಾಡ ಠಾಣಾ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ CEIR Portal ಬಳಸಿ ಮತ್ತಷ್ಟು 100 ಮೊಬೈಲ್ಗಳನ್ನು ಟ್ರೇಸ್ ಮಾಡಲಾಗಿದೆ.
ಮೊಬೈಲ್ ಕಳೆದುಹೋದರೆ ಏನು ಮಾಡಬಹುದು?
KSP App ನಲ್ಲಿ ‘E-Lost’ ವಿಭಾಗದ ಮೂಲಕ ದೂರು ದಾಖಲಿಸಿ, ನಿಮ್ಮ ಮೊಬೈಲ್ IMEI ಸಂಖ್ಯೆಯನ್ನು ನಮೂದಿಸಿ ಸ್ವೀಕೃತಿ ಪಡೆಯಬೇಕು. ನಂತರ CEIR ಪೋರ್ಟಲ್ ಮೂಲಕ ಮೊಬೈಲ್ನ್ನು ಬ್ಲಾಕ್ ಮಾಡಿದರೆ ದುರುಪಯೋಗವನ್ನು ತಡೆಯಬಹುದು. ಸಾರ್ವಜನಿಕರು ತಕ್ಷಣ ಇ-ಲಾಸ್ಟ್ ವರದಿ ಸಲ್ಲಿಸಿದರೆ, ಮೊಬೈಲ್ ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಹೆಚ್ಚಿನ ಸಹಕಾರ ಸಿಗುತ್ತದೆ. ತಂತ್ರಜ್ಞಾನ ಮತ್ತು ಪೊಲೀಸ್ ಇಲಾಖೆಯ ಸಂಯೋಜಿತ ಪ್ರಯತ್ನದಿಂದ ಕಳೆದುಹೋದ ಮೊಬೈಲ್ ಮರಳಿ ಸಿಗುವ ಸಾಧ್ಯತೆ ಹೆಚ್ಚುತ್ತದೆ.

















