ಉಡುಪಿ: ರಾಜ್ಯಮಟ್ಟದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಬೃಹತ್ ಮೆರವಣಿಗೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೋಮವಾರ ಜೋಡುಕಟ್ಟೆಯಲ್ಲಿ ಚಾಲನೆ ನೀಡಿದರು.
ಸಹಕಾರಿ ಸಂಸ್ಥೆ ಸಿಬ್ಬಂದಿ, ನವೋದಯ ಸ್ವ-ಸಹಾಯ ಸಂಘದ ಸದಸ್ಯರು ಸಹಿತ 3 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಹಕಾರಿ ಸಂಘ, ಮೀನುಗಾರರ ಸಹಕಾರಿ ಸಂಘ, ದ.ಕ. ಹಾಲು ಉತ್ಪಾದಕರ ಸಹಕಾರಿ, ಉಡುಪಿ ಶ್ರೀಕೃಷ್ಣನ ದೇವರ ಮೂರ್ತಿ ಸಹಿತ ವಿವಿಧ ಟ್ಯಾಬ್ಲೋಗಳು ಹಾಗೂ ಸಹಕಾರ ರಥ ಮೆರವಣಿಗೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದವು.
2 ಸಾವಿರಕ್ಕೂ ಹೆಚ್ಚಿನ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ನಡೆಯಿತು. ಪಟಾಕಿ, ಕೀಲು ಕುದುರೆ, ನಾಸಿಕ್ ಬ್ಯಾಂಡ್, ಚೆಂಡೆ, ಯಕ್ಷಗಾನ ವೇಷಧಾರಿಗಳು, ಕೊಂಬು ಕಹಳೆ, ತಟ್ಟಿರಾಯ, ಗೊಂಬೆ ಹಾಗೂ ಕಲಾ ತಂಡಗಳ ಪ್ರದರ್ಶನ ಗಮನಸೆಳೆದವು. ಜೋಡುಕಟ್ಟೆಯಿಂದ ಚಿತ್ತರಂಜನ್ ಸರ್ಕಲ್, ಮಿಷನ್ ಆಸ್ಪತ್ರೆ ಮಾರ್ಗವಾಗಿ ಸಾಗಿ ಬಂದ ಸಹಕಾರಿ ಮೆರವಣಿಗೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣವನ್ನು ಪ್ರವೇಶಿಸಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಶ್ರೀಧರ ಬಿ.ಎಸ್., ಹರೀಶ್ ಕಿಣಿ, ಚಂದ್ರಪ್ರತಿಮಾ, ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು.