ಉಡುಪಿ: ಕಟಪಾಡಿ ಎಸ್ವಿಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಏ. 11ರಂದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.

ತಿರುಪತಿಯಿಂದಲೇ ದೇವರ ವಿಗ್ರಹ ತಂದು, ತಿರುಪತಿ ತಿರುಮಲ ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕರಿಂದಲೇ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನ ಜರಗಲಿವೆ. ಮಧ್ಯಾಹ್ನ 3.30ಕ್ಕೆ ಕಟಪಾಡಿ ಪೇಟೆಯಲ್ಲಿ ಶ್ರೀನಿವಾಸ ದೇವರನ್ನು ಸ್ವಾಗತಿಸಿ, ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು’ ಎಂದರು.

ಕೆ. ಕೃಷ್ಣಮೋಹನ್ ಪೈ ಯುಎಸ್ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್ವಿಎಸ್ ವಿದ್ಯಾವರ್ಧಕ ಸಂಘ, ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳು, ದೈವಸ್ಥಾನ, ಭಜನಾ ಮಂದಿರಗಳು, ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಂದು ಸಂಜೆ 5ರಿಂದ ದೇವರ ವಿವಾಹ ಮಂಟಪ ಪ್ರವೇಶ, ವಿವಾಹ ಮಂಟಪಕ್ಕೆ ಪದ್ಮಾವತಿ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ಮಾಲಾ ಧಾರಣೆ ನಡೆದು 6.25ಕ್ಕೆ ಶ್ರೀನಿವಾಸ ದೇವರಿಗೆ ಪದ್ಮಾವತಿ ದೇವಿಯ ಕನ್ಯಾದಾನ, ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚರಣೆ ಮಹಾಪ್ರಸನ್ನ ಪೂಜೆ ಅಷ್ಠಾವಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗ ಜರಗಲಿದೆ. ರಾತ್ರಿ 8ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸತ್ಯೇಂದ್ರ ಪೈ ಅವರು ತಿಳಿಸಿದ್ದಾರೆ.

ವಿಶೇಷಚೇತನ ಹಾಗೂ ಅಶಕ್ತ ನಾಗರಿಕರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಭಾಗವಹಿಸುವ ಭಕ್ತರಿಗೆ ತಿರುಪತಿಯಿಂದ ತರಿಸಿಕೊಳ್ಳಲಾದ ಲಡ್ಡುಪ್ರಸಾದ ಸಹಿತ ಪ್ರಸಾದ ವಿತರಣೆ ನಡೆಯಲಿದೆ. ವಾಹನ ನಿಲುಗಡೆ ವ್ಯವಸ್ಥೆ, ವಾಹನ ನಿಲುಗಡೆ ಸ್ಥಳದಿಂದ ಕಲ್ಯಾಣ ಮಂಟಪದವರೆಗೆ ಬದಲಿ ವಾಹನ ವ್ಯವಸ್ಥೆಯಿದೆ.

ವೆಂಕಟರಮಣ ದೇವರಿಗೆ ಹೂ, ಹಣ್ಣು, ತುಳಸಿ ದಳ ಅರ್ಪಿಸುವವರು ಮಧ್ಯಾಹ್ನ 3ರೊಳಗೆ ಕಲ್ಯಾಣ ಮಂಟಪದಲ್ಲಿ ನೀಡಬಹುದು.

















