ಏ.14 ರಂದು ಅಜೆಕಾರಿನಲ್ಲಿ “ಜ್ಞಾನಸುಧಾ ಜ್ಞಾನ ದೇಗುಲ” ಅದ್ಧೂರಿ ಉದ್ಘಾಟನೆ

ಕಾರ್ಕಳ: ಅಜೆಕಾರು ಪದ್ಮಗೋಪಾಲ್ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ತಮ್ಮ ತಾಯಿ ಪದ್ಮಾಶೆಟ್ಟಿಯವರ ನೂರನೇ ಜನ್ಮದಿನದ ಅಂಗವಾಗಿ ಹಾಗೂ ತಂದೆ-ತಾಯಿಯ ಕನಸನ್ನು ನನಸು ಮಾಡುವ ಉದ್ದೇಶದಿಂದ ಹುಟ್ಟೂರು ಅಜೆಕಾರಿನಲ್ಲಿ ಈ ಶಿಕ್ಷಣ ಕೇಂದ್ರವನ್ನು ನಿರ್ಮಿಸಿದ್ದು ಆ ಕೇಂದ್ರಕ್ಕೆ ಜ್ಞಾನಸುಧಾಜ್ಞಾನದೇಗುಲ” ಎಂದು ಹೆಸರಿಡಲಾಗಿದೆ. ಸಮಾಜಕ್ಕೆ ಮಾದರಿ ಉಡುಗೊರೆಯಾಗಿ ನೀಡಲಾಗುತ್ತಿರುವ ಈ ‘ಜ್ಞಾನಸುಧಾ ಜ್ಞಾನ ದೇಗುಲ’ವು ಏಪ್ರಿಲ್ 14ರಂದು ಸಂಜೆ 5.30 ಕ್ಕೆ ಅಜೆಕಾರಿನ ಪದ್ಮ ನಗರದಲ್ಲಿ ಉದ್ಘಾಟನೆಗೊಳ್ಳಲಿದೆ.

ಅಧ್ಯಕ್ಷತೆಯನ್ನು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್, ಕಾಲೇಜಿನ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ಉದ್ಘಾಟನೆಯನ್ನು ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಂ. ಮೋಹನ್ ಆಳ್ವ, ರಸಾಯನಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಲ್ಯಾಬ್ ಉದ್ಘಾಟನೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಚಾನ್ಸಲರ್ ಎನ್. ವಿಶಾಲ್ ಹೆಗ್ಡೆ, ಫಿಸಿಕ್ಸ್ ಮತ್ತು ಬಯಾಲಜಿ ಲ್ಯಾಬ್ ಉದ್ಘಾಟನೆಯನ್ನು ಮುಂಬೈಯ ಉದ್ಯಮಿ ಜಿ. ಶಿವರಾಮ ಶೆಟ್ಟಿ ನೆರವೇರಿಸಲಿದ್ದಾರೆ.

ಬಡ ಮತ್ತು ಪ್ರತಿಭಾಂತ ವಿದ್ಯಾರ್ಥಿಗಳಿಗೆ ಬೆಳಕು:

ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು “ಜ್ಞಾನಸುಧಾಜ್ಞಾನದೇಗುಲ” ದ ಮುಖ್ಯ ಉದ್ದೇಶವಾಗಿದೆ.

ಈ ಕ್ಯಾಂಪಸ್‌ನಲ್ಲಿ 9 ರಿಂದ 12ನೇ ತರಗತಿವರೆಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತದೆ. ಜೊತೆಗೆ ಮರ್ಣೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯೂ ರೂಪಿಸಲಾಗಿದೆ. ಟ್ರಸ್ಟ್‌ನ ನಾಲ್ಕನೇ ಕ್ಯಾಂಪಸ್ ಇದಾಗಿದ್ದು, ತಾಯಿಯ ಜನ್ಮದಿನದಂದೇ ಉದ್ಘಾಟನೆಗೊಳ್ಳುತ್ತಿರುವುದು ವಿಶೇಷವಾಗಿದೆ.

ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ

ಜ್ಞಾನಸುಧಾಜ್ಞಾನದೇಗುಲ ಶಾಲಾ ಆವರಣಕ್ಕೆ ಹೊಂದಿಕೊಂಡಿರುವ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವು ಏಪ್ರಿಲ್ 12ರಂದು ನಡೆಯಲಿದೆ. ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಎಪ್ರಿಲ್ 10-ಎ.14 ಈ ಕಾರ್ಯಕ್ರಮಗಳು ಜರುಗಲಿದೆ.