ನೀವೂ ತಿರುಪತಿಗೆ ಹೋಗುವ ಪ್ಲಾನ್ ಮಾಡ್ತಿದೀರಾ? ಹಾಗಾದ್ರೆ ಈ ವಿಷಯ ತಿಳಿದಿರಲೇಬೇಕು- ದರ್ಶನದ ಅವಧಿ ಇಲ್ಲಿದೆ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋದು ಭಗವದ್ಭಕ್ತರಿಗೆ ಪುಣ್ಯದ ಕೆಲಸ. ಜೀವಮಾನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಆಸೆ ಇರುತ್ತದೆ. ಅದರೊಂದಿಗೆ ಪ್ರತಿವರ್ಷವೂ ಇಲ್ಲಿಗೆ ಭೇಟಿ ನೀಡುವ ಭಕ್ತರೂ ಹಲವರಿರುತ್ತಾರೆ. ಇದೀಗ ಬೇಸಗೆ ರಜೆ ಪ್ರಾರಂಭವಾಗಿದೆ. ಹಾಗಾಗಿ ತಿರುಪತಿಗೆ ಹೋಗುವವರ ಸಂಖ್ಯೆಯೂ ದೊಡ್ಡದಿದೆ. ನೀವೂ ತಿರುಪತಿಗೆ ಹೋಗಲು ಪ್ಲಾನ್ ಮಾಡ್ತಿದೀರಾದ್ರೆ ಈ ವಿಷಯ ನಿಮ್ಮ ಗಮನದಲ್ಲಿರಲಿ

ಏ.5 ಭಾನುವಾರ ಒಂದೇ ದಿನದಲ್ಲಿ  83,271 ಭಕ್ತರು ತಿಮ್ಮಪ್ಪನ ದರ್ಶನ ಮಾಡಿರುತ್ತಾರೆ. 25,018 ಜನರು ಕೆಲ ಸೇವೆಗಳಲ್ಲೂ ಭಾಗವಹಿಸಿದ್ರು. ಹೋದ ವಾರದಲ್ಲಿ ತಿರುಮಲ ಶ್ರೀವಾರಿ ಹುಂಡಿಯಿಂದ 3.78 ಕೋಟಿ ರೂಪಾಯಿ ಆದಾಯ ಬಂದಿದೆ ಎಂದೂ ಮಾಹಿತಿಯಿದೆ.

ಕಾಯುವ ತಾಳ್ಮೆ, ಸಮಯ ಬೇಕು

ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರು 20 ಕೌಂಟರ್ಗಳಲ್ಲಿ ಕಾಯುವ ಪರಿಸ್ಥಿತಿ ಬಂದಿದೆ. ಏ.6 ರಂದು ಸೋಮವಾರದ ಮಾಹಿತಿಯ ಪ್ರಕಾರ SSD ಟೋಕನ್‌ ಗಳು ಇಲ್ಲದ ಭಕ್ತರು ವೆಂಕಟೇಶ್ವರನ ದರ್ಶನ ಪಡೆಯಲು 12 ಗಂಟೆಗಳು ಕಾಯಬೇಕಾಗಿದೆ. ಜೊತೆಗೆ 300 ರೂ. ಟೋಕನ್‌ ಗಳನ್ನು ಹೊಂದಿರುವ ಭಕ್ತರು ಮೂರು ಗಂಟೆಗಳಲ್ಲಿ ತಿರುಮಲ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ತಿರುಪತಿಯ ಶ್ರೀನಿವಾಸಂ ಕಾಂಪ್ಲೆಕ್ಸ್, ವಿಷ್ಣು ನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್‌ ನಲ್ಲಿ ಭಾನುವಾರ 10,000 ಸರ್ವ ದರ್ಶನ ಟೋಕನ್‌ ಗಳನ್ನು ನೀಡಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶ್ರೀವರಿ ಮೆಟ್ಟಿಲು ಮಾರ್ಗದಲ್ಲಿ ಭಕ್ತರಿಗೆ 2,000 ಸರ್ವ ದರ್ಶನ ಟೋಕನ್‌ ಗಳನ್ನು ನೀಡಲಾಯಿತು.

ತಿರುಪತಿಗೆ ಹೋಗುವ ಮುನ್ನ ಪ್ಲಾನ್ ಮಾಡಿ

ಬೇಸಿಗೆ ರಜೆ ಅಲ್ಲದೆ ಬಿಸಿಲಿನ ಕಾವು ಅಧಿಕವಾಗಿರುವುದರಿಂದ ಗಂಟೆಗಟ್ಟಲೇ ವೃದ್ಧರು ಹಾಗೂ ಮಕ್ಕಳೊಡನೆ ದರ್ಶನಕ್ಕೆ ಕಾಯುವುದು ತ್ರಾಸದಾಯಕವಾಗಬಹುದು. ಆದ್ದರಿಂದ ತುಂಬಾ ಅನಿವಾರ್ಯವಿದ್ದಲ್ಲಿ ಮಾತ್ರ ಈ ಸಂದರ್ಭದಲ್ಲಿ ತಿರುಪತಿಗೆ ಭೇಟಿ ನೀಡಿ. ಇಲ್ಲದಿದ್ದಲ್ಲಿ ನಿಮ್ಮ ಪ್ರವಾಸವನ್ನು ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ. ಹಾಗೆ ಅನಿವಾರ್ಯವಾಗಿ ಭೇಟಿ ನೀಡಲೇ ಬೇಕಾದಲ್ಲಿ ಮುಂಚಿತವಾಗಿಯೇ ಟಿಕೆಟ್ ಬುಕಿಂಗ್ ಮಾಡಿಕೊಂಡು, ಸಾಕಷ್ಟು ಸಮಯ ಇಟ್ಟುಕೊಂಡು ಭೇಟಿ ನೀಡುವುದು ಉತ್ತಮ.