ಸದ್ದು ಮಾಡುತ್ತಲೇ ಇದೆ ಯಕ್ಷಗಾನದ ಸಿಳ್ಳೆ ಪ್ರಕರಣ: ಕಲಾವಿದನ ನಡೆಗೆ ಹೆಚ್ಚಿದ ಆಕ್ರೋಶ, ಯಕ್ಷಪ್ರಿಯರು ಮತ್ತಷ್ಟು ಗರಂ

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡತೊಡಗಿದ ಯಕ್ಷಗಾನ ಸಿಳ್ಳೆ ಪ್ರಕರಣ, ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೀಡಾಗುತ್ತಿರುವ ಹಾಟ್ ಟಾಪಿಕ್ ಆಗಿದೆ.

ಯಕ್ಷಗಾನ ಬಯಲಾಟದಲ್ಲಿ ಕೆಲವರು ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಕೋಪಗೊಂಡು ರಂಗಸ್ಥಳದಿಂದಲೇ ತರಾಟೆಗೆ ತೆಗೆದುಕೊಂಡು ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ, ದೊಂಬರಾಟ ಅಲ್ಲ ಇದು. ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ನಿಮಗೆ ನೋಡಲಾಗದಿದ್ದರೆ ಬನ್ಸ್ ತಿಂದು ಹೋಗಿ ಎಂದು ರೇಗಿದ ಘಟನೆ, ಎಲ್ಲಡೆ ಸದ್ದು ಮಾಡತೊಡಗಿದ್ದು, ಕಲಾವಿದ ಅಶೋಕ್ ಭಟ್ ಕುರಿತು ಪರ ಮಾತಾಡುವವರಿಗಿಂತ ಈ ಘಟನೆಯ ಕುರಿತು ಕೆಂಗಣ್ಣು ಬೀರಿದ ಯಕ್ಷ ಕಲಾಭಿಮಾನಿಗಳೇ ಜಾಸ್ತಿಯಾಗುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ, ಯಕ್ಷಗಾನ ಗುಂಪುಗಳಲ್ಲಿ ಕಲಾವಿದನಿಗೆ “ಬನ್ಸ್ ಕುಮಾರ” ಎಂದು ಯಕ್ಷಾಭಿಮಾನಿಗಳೇ ನಾಮಕರಣ ಮಾಡುತ್ತಿದ್ದಾರೆ. ಈ ಹಿಂದೆಯೂ ಈ ಕಲಾವಿದ ಹಲವು ಯಕ್ಷಗಾನ ಪಾತ್ರ ಮಾಡುವಾಗ ಅಧಿಕ ಪ್ರಸಂಗ ಮಾಡಿ, ಪ್ರೇಕ್ಷಕರ ಮನಸ್ಸನ್ನು, ಕಲಾಭಿರುಚಿಯನ್ನು ಹಾಳುಗೆಡವಿದ ಕುರಿತೂ ಚರ್ಚೆಗಳಾಗುತ್ತಿವೆ. ಯಕ್ಷಗಾನದಲ್ಲಿ ಸಿಳ್ಳೆ ಹೊಡೆಯೋದು, ಸಂಭ್ರಮಿಸೋದು ಪ್ರೇಕ್ಷಕನ ಹಕ್ಕು,  ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಿಯಂತ್ರಿಸಲು ಬಾರದು.  ಪ್ರೇಕ್ಷಕರಿಗೆ ತಮ್ಮ ಪ್ರತಿಕ್ರಿಯೆಯನ್ನು ಸಿಳ್ಳೆಯ ಮೂಲಕ ಹೇಳುವ ಹಕ್ಕಿದೆ. ಆದರೆ ಕಲಾವಿದ ವೇದಿಕೆಯಲ್ಲಿಯೇ ಪ್ರೇಕ್ಷಕರನ್ನು  ಬೈದಿದ್ದು ಪ್ರಬುದ್ಧ ನಡೆಯಲ್ಲ ಎಂದು ಯಕ್ಷಗಾನ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.