ಉಡುಪಿ: ಕುಟುಂಬ ಕಲಹದ ಹಿನ್ನೆಲೆಯಲ್ಲಿ 28 ವರ್ಷದ ಮಹಿಳೆ ತನ್ನ 11 ವರ್ಷದ ಮಗಳೊಂದಿಗೆ ನಾಪತ್ತೆಯಾಗಿರುವ ಘಟನೆ ಕಾಪು ತಾಲೂಕಿನ ಬೆಳಪು ಗ್ರಾಮದ ಪುಂಚಲಕಾಡು ಪ್ರದೇಶದಲ್ಲಿ ನಡೆದಿದೆ.
ರೇಣುಕಾ ಗಂಗಾಧರ ಪೂಜಾರ್ ಎಂಬವರು ಪುತ್ರಿ ಪ್ರತೀಕ್ಷಾ ಅವರೊಂದಿಗೆ ನಾಪತ್ತೆಯಾಗಿದ್ದಾರೆ. ಇವರು ಪುಂಚಲಕಾಡು ಮರಿಯಾ ಬೇಕರಿ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮಾರ್ಚ್ 20ರಂದು ಮಧ್ಯಾಹ್ನ ಊಟದ ವಿಚಾರವಾಗಿ ದಂಪತಿ ನಡುವೆ ಕ್ಷುಲ್ಲಕ ಜಗಳ ನಡೆದಿದ್ದು, ಬಳಿಕ ಗಂಗಾಧರ್ ಕೆಲಸಕ್ಕೆ ತೆರಳಿದ್ದರು. ರಾತ್ರಿ ಮನೆಗೆ ವಾಪಸಾದಾಗ ಮನೆಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಒಳಗೆ ಪರಿಶೀಲಿಸಿದಾಗ ಪತ್ನಿ ಮೊಬೈಲ್ ಫೋನ್ ಬಿಟ್ಟು ಮಗಳೊಂದಿಗೆ ಕಾಣೆಯಾಗಿರುವುದು ತಿಳಿದುಬಂದಿದೆ.
ಬಂಧುಬಳಗ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಗಂಗಾಧರ್ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಯಿ-ಮಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.
















